ಚಿಕ್ಕಬಳ್ಳಾಪುರ ಭೂಕಂಪನ ಪೀಡಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭೇಟಿ

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹಾಗೂ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿಗಳ ತಂಡ ಭೂಕಂಪನಪೀಡಿತ  ಶೆಟ್ಟಿಗೆರೆ ಮತ್ತು  ಬಂಡಹಳ್ಳಿ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್, ಇತ್ತೀಚೆಗೆ   ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸಂಭವಿಸಿದ ಲಘು  ಭೂಕಂಪನ ಗಳಿಂದ ಜನರು ಆತಂಕಗೊಂಡಿದ್ದರು. ಆದ ಕಾರಣದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಭಾಗಗಳಲ್ಲಿ ಕಳೆದ ಕೆಲವು ದಶಕಗಳಿಂದ ಈ ಪ್ರಮಾಣದ ಮಳೆ ಬಿದ್ದಿರಲಿಲ್ಲ. ಈ ಬಾರಿ ದಾಖಲೆಯ ಉತ್ತಮ ಮಳೆಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಆದ ಕಾರಣ ಅಂತರ್ಜಲಕ್ಕೆ ನೀರು ಹೆಚ್ಚು ಸೇರುತ್ತಿದೆ. ಈ ಸಂದರ್ಭದಲ್ಲಿ ಸ್ಫೋಟದ ರೀತಿಯ ಸದ್ದುಗಳು  ಹಾಗೂ ಲಘು ಭೂಕಂಪನದ ಅನುಭವಗಳು ಉಂಟಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದರು.

ಇದರ ಬಗ್ಗೆ ವಿಸ್ತೃತವಾಗಿ  ಶೀಘ್ರವಾಗಿ  ವರದಿ ನೀಡುವಂತೆ ತಿಳಿಸಿದ್ದೇನೆ. ಭೂಕಂಪನ ಸಂಭವಿಸಿರುವುದಕ್ಕೆ ಸತ್ಯ ಸಂಗತಿಯನ್ನ  ಜನರಿಗೆ ವೈಜ್ಞಾನಿಕ ಅಧಿಕಾರಿಗಳು  ಇಂದು ತಿಳಿಸಿಕೊಟ್ಟಿದ್ದಾರೆ. ಜೊತೆಗೆ ಮುಂದಿನ ವಾರ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳ ತಂಡ ಸಹ ಭೂಕಂಪನಪೀಡಿತ ಗ್ರಾಮಗಳಿಗೆ ಭೇಟಿ ನೀಡಲಿದೆ.  ಜನರಲ್ಲಿನ ಎಲ್ಲಾ ರೀತಿಯ ಭಯವನ್ನು ಪರಿಹರಿಸಲಿದೆ. ಭೌಗೋಳಿಕವಾಗಿ ನೋಡುವುದಾದರೆ ನಾವು ಅತ್ಯಂತ ಸುರಕ್ಷಿತ ವಲಯದಲ್ಲಿ ಇದ್ದೇವೆ. ಇಲ್ಲಿ ಭೂಕಂಪದ ಸಾಧ್ಯತೆ  ತೀರಾ ಕಡಿಮೆ ಎಂದು ಜನರಲ್ಲಿ ಧೈರ್ಯ ತುಂಬಿದರು.

 ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಕಲ್ಲು ಗಣಿಗಾರಿಕೆಯಲ್ಲಿ ಆಳದ ವರೆಗೆ ಸ್ಫೋಟ ನಡೆಸದಂತೆ  ಕಟ್ಟು ನಿಟ್ಟಿನ ಸೂಚನೆಗಳನ್ನು ಮಾಲೀಕರಿಗೆ ನೀಡಬೇಕು. ನಿಯಮಗಳನ್ನು ಪಾಲಿಸಿ ಗಣಿಗಾರಿಕೆ ನಡೆಸಬಹುದು. ನಿಯಂತ್ರಿತ  ಸ್ಫೋಟಕದೊಂದಿಗೆ ಗಣಿಗಾರಿಕೆ ನಡೆಸಲು ಹಾಗೂ  ಸರ್ಕಾರ ನೀಡಿರುವ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು  ಗಣಿಗಾರಿಕೆ ನಡೆಸಲು ಮಾತ್ರ ಅವಕಾಶ ಇದೆ.  ಒಂದು ವೇಳೆ  ನಿಯಮಗಳನ್ನ ಉಲ್ಲಂಘಿಸಿದವರ ಪರವಾನಗಿಯನ್ನ ಯಾವುದೇ ಮುಲಾಜಿಲ್ಲದೆ  ರದ್ದುಗೊಳಿಸಬೇಕು ಎಂದು  ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವಾರಕ್ಕೆ ಒಮ್ಮೆ ಅಧಿಕಾರಿಗಳು ಈ ಭಾಗದ ಹಳ್ಳಿಗಳಿಗೆ ಮತ್ತು ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ನಿಯಮಗಳು ಪಾಲನೆ ಆಗುತ್ತಿವೆಯೇ ಎನ್ನುವುದನ್ನು ಪರಿಶೀಲಿಸಬೇಕು ಎಂದರು.

ಗಣಿಗಾರಿಕೆಯಿಂದ ಈ ರೀತಿಯ ಕಂಪನಗಳು ಸಂಭವಿಸಿದೆಯೇ ಇಲ್ಲವೆ ಎನ್ನುವ ಬಗ್ಗೆಯೂ  ವರದಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ನಿಯಮಿತವಾಗಿ ಅಧಿಕಾರಿಗಳು ಈ ಭಾಗದ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ನಿಯಮಗಳು ಪಾಲನೆ ಆಗುತ್ತಿವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಗಣಿಗಾರಿಕೆ ಮಾಡುವವರಿಗೆ ಪರವಾನಗಿ ನೀಡುವ ವೇಳೆ ಮಾರ್ಗಸೂಚಿ, ನಿಯಮಗಳಿವೆ. ಅದನ್ನು ಪಾಲಿಸಬೇಕು. ನಿಗದಿತ ಸಮಯದಲ್ಲಿ  ಗಣಿಗಾರಿಕೆಗೆ ಸ್ಪೋಟಕವನ್ನು ಸಿಡಿಸುವಂತಾಗಬೇಕು. ಗಣಿ ಮಾಲೀಕರ ಜತೆ ನಿರಂತರವಾಗಿ ಸಭೆ ಮಾಡಬೇಕು. ಎಚ್ಚರಿಕೆ ನೀಡಬೇಕು.  ಆಳವಾದ ಬ್ಲಾಸ್ಟಿಂಗ್ ಮಾಡದಂತೆ ನಿಗಾವಹಿಸಬೇಕು.ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸಚಿವರ ಭೇಟಿಗೂ ಮುನ್ನ  ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ  ಇತ್ತೀಚೆಗೆ ಸಂಭವಿಸಿದ ಭೂಕಂಪನ   ಪೀಡಿತ ವಿವಿಧ  ಪ್ರದೇಶಗಳಿಗೆ  ರಾಜ್ಯ ನೈಸರ್ಗಿಕ  ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಎಸ್.ಜಗದೀಶ್ ಹಾಗೂ   ರಮೇಶ್ ದಿಕ್ಪಾಲ್  ಅವರ  ತಂಡ    ಭೇಟಿ  ನೀಡಿ  ಅಧ್ಯಯನ ನಡೆಸಿತು.

ಈ  ವೇಳೆ  ಶೆಟ್ಟಿಗೆರೆ ಮತ್ತು  ಬಂಡಹಳ್ಳಿ ಗ್ರಾಮದಲ್ಲಿನ ಮನೆಗಳನ್ನು    ಅಧಿಕಾರಿಗಳು  ಪರಿಶೀಲಸಿ  ಸ್ಥಳೀಯರಿಗೆ   ಧೈರ್ಯ  ತುಂಬಿದರು. ಭೂಕಂಪನದ ಮೊದಲು ಮತ್ತು ಭೂಕಂಪನದ ಸಮಯದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ತಿಳಿಸಿಕೊಟ್ಟರು ಹಾಗೂ ಭೌಗೋಳಿಕವಾಗಿ ನೋಡುವುದಾದರೆ ನೀವು ಅತ್ಯಂತ ಸುರಕ್ಷಿತ ವಲಯದಲ್ಲಿ ಇದ್ದೀರಾ . ಇಲ್ಲಿ ಭೂಕಂಪದ ಸಾಧ್ಯತೆ  ತೀರಾ  ವಿರಳ ಎಂದು ತಿಳಿಸಿ   ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ,  ತಹಶೀಲ್ದಾರ್  ಗಣಪತಿ  ಶಾಸ್ತ್ರೀ ಹಾಗೂ  ವಿವಿಧ  ಇಲಾಖೆಗಳ  ಅಧಿಕಾರಿಗಳು  ಮತ್ತು  ಸಿಬ್ಬಂದಿ  ಇದ್ದರು.