ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಸ್ಥಳದಲ್ಲೇ ಮಗ ಸಾವು

ಚಾಮರಾಜನಗರ: ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಸ್ಥಳದಲ್ಲೇ ಮಗ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯ ಮುಂಭಾಗವೇ ಶನಿವಾರ ರಾತ್ರಿ ಸಂಭವಿಸಿದೆ.

ಮೈಸೂರು ಮೂಲದ ಸೈಯದ್ ರಸೂಲ್ (26) ಎಂಬಾತ ಮೃತ ವ್ಯಕ್ತಿ. ಮೃತನ ತಂದೆ ಹಾಗೂ ಚಾಲಕ ಸೈಯದ್ ಅಕ್ರಂ ಪಾಷಾ (55) ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ನಿನ್ನೆ ರಾತ್ರಿ ಎಂ-ಸ್ಯಾಂಡ್ ತುಂಬಲು ಬರುತ್ತಿದ್ದ ವೇಳೆ ಬೇರೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ಬ್ರೇಕ್ ಹಾಕಿದಾಗ ಟಿಪ್ಪರ್ ಪಲ್ಟಿಯಾಗಿದೆ.

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಎಂ-ಸ್ಯಾಂಡ್ ತುಂಬಿದ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಅಸುನೀಗಿದ್ದರು.