ಕನಕಪುರ: ಕೊರೋನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ ನಡೆಸಿದಕ್ಕೆ ರ‍್ಯಾಲಿ ಮಾಡಬೇಡಿ ಎಂದು ನೋಟೀಸ್ ಕೊಟ್ಟಿದ್ದಾರೆ. ಇದು ಕಾನೂನು ಬಾಹಿರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಪ್ರಾರಂಭಿಸಿರುವ ಎರಡನೆ ದಿನದ ಪಾದಯಾತ್ರೆ ವೇಳೆ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಕರ್ಫ್ಯೂ ಉಲ್ಲಂಘಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ ಆದರೆ ಕೇವಲ 30 ಮಂದಿ ಮೇಲೆ ಏಕೆ ಎಫ್‍ಐಆರ್ ಹಾಕಲಾಗಿದೆ ಎಂದು ಡಿ.ಕೆ.ಶಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಹಾಗೂ ಸಿದ್ಧರಾಮಯ್ಯ ಸೇರಿದಂತೆ ಮೂವತ್ತು ಮಂದಿ ಮೇಲೆ ಮಾತ್ರ ಸಾತನೂರು ಠಾಣೆಯಲ್ಲಿಎಫ್‍ಐಆರ್ ದಾಖಲಾಗಿದೆ.
ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದರಲ್ಲ, ಅವರ ಮೇಲೆಲ್ಲಾ ಕೇಸು ಹಾಕುತ್ತಾರೆಯೇ ಎಂದು ಪ್ರಶ್ನಿಸಿದ ಡಿಕೆಶಿ, ಕೇವಲ ಮೂವತ್ತು ಜನರ ಮೇಲೆ ಕೇಸು ಹಾಕಿದರೆ ಏನರ್ಥ ಎಂದು ಪ್ರಶ್ನಿಸಿದರು.
ಪಾದಯಾತ್ರೆಯಲ್ಲಿ ಸಾಧು-ಸಂತರು ಭಾಗವಹಿಸಿದ್ದರು. ನಾಡಿನ ಅನೇಕ ಗಣ್ಯರು ಭಾಗವಹಿಸಿದ್ದರು. ಅವರ ಮೇಲೂ ಕೇಸು ಹಾಕಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.
ನಿಮಗೆ ಕೊರೋನಾ ಬಂದಿದೆ, ಚೆಕ್ ಮಾಡಬೇಕು ಎಂದು ಅಧಿಕಾರಿಗಳು ನನ್ನ ಬಳಿ ಬಂದಿದ್ದರು. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚು ಎಂದು ತೋರಿಸಲು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಜನರನ್ನು ಕಂಡ ಕಂಡಲ್ಲಿ ಬೆದರಿಸಲಾಗುತ್ತಿದೆ. ಕೊರೋನಾ ಸಂಖ್ಯೆ ಹೆಚ್ಚಳ ಎಂದು ಭೋಗಸ್ ಲೆಕ್ಕ ತೋರಿಸಲಾಗುತ್ತಿದೆ. ಕೊರೋನಾ ಹೆಸರಿನಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ನನಗೆ ಗೊತ್ತು ಎಂದುರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮಾತಿನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ನಾವು ಏಕೆ ಜನರಲ್ಲಿ ಕ್ಷಮೆ ಯಾಚಿಸಬೇಕು? ಏನು ತಪ್ಪು ಮಾಡಿದ್ದೇವೆ ಎಂದು ಕ್ಷಮೆ ಯಾಚಿಸಬೇಕು? ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇದು ತಪ್ಪು ಎಂದು ಕ್ಷಮೆ ಕೇಳಬೇಕಾ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೋನಾ ಹೆಚ್ಚಳವಾದರೆ ನಮ್ಮ ಮೇಲೆ ಹೊಣೆ ಹೊರಿಸಲು ಹುನ್ನಾರ ನಡೆಸಿದ್ದಾರೆ. ಏನು ಮಾಡುತ್ತಾರೋ ಮಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಕೊರೊನಾ ಹೆಸರಿನಲ್ಲೂ ಇವರು ಲಂಚ ಹೊಡೆಯುತ್ತಾರಲ್ಲ, ಅದರ ಹೊಣೆ ಯಾರ ಮೇಲೆ ಹೊರಿಸುತ್ತಾರೆ, ಹತ್ತು ಸಾವಿರ ಬೆಡ್‍ಗಳನ್ನು ತಂದು ಹತ್ತು ಜನರನ್ನು ಮಲಗಿಸಲಿಲ್ಲವಲ್ಲ ಇದರ ಹೊಣೆ ಯಾರ ಮೇಲೆ ಹೋರಿಸಬೇಕು ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಬೆಳಿಗ್ಗೆ ದೊಡ್ಡ ಆಲನಹಳ್ಳಿ ವೃತ್ತದಿಂದ ಎರಡನೇ ದಿನದ ಪಾದಯಾತ್ರೆ ಆರಂಭಿಸಿದರು.