ದೇವರನಾಡಲ್ಲಿ ಸಂಗಾತಿ ವಿನಿಮಯ ಪ್ರಕರಣ: 7 ಮಂದಿ ಅರೆಸ್ಟ್

ತಿರುವನಂತಪುರಂ: ಸಂಗಾತಿ ವಿನಿಮಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ದೇವರನಾಡು ಕೇರಳದಲ್ಲಿ ನಡೆದ ಈ ಅನೈತಿಕ ಚಟುವಟಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ.

ಮುಂದುವರೆದ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಸ್ವಾಪ್ಪಿಂಗ್ ಚಟುವಟಿಕೆ ಭಾರತದಲ್ಲಿ ಅಂತರ್ಗತವಾಗಿತ್ತು. ಆದರೆ ಕೇರಳದಲ್ಲಿ ದೊಡ್ಡ ಜಾಲವೇ ಬಹಿರಂಗಗೊಂಡಿದೆ.

ಇತ್ತೀಚೆಗೆ ಕರುಕಚಲ್ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ಆಗಮಿಸಿ ತನ್ನ ಪತಿ  ಇತರರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನನ್ನನ್ನು ಬಲವಂತ ಪಡಿಸುತ್ತಾರೆ ಎಂದು ದೂರು ನೀಡಿದ್ದರು.

ಇದೇ ಮಾದರಿಯ ಪ್ರಕರಣಗಳು ಕಯಂಕುಲಂ ಪ್ರದೇಶದಲ್ಲೂ ವರದಿಯಾಗಿದ್ದವು.

ಪೊಲೀಸ್ ಅಧಿಕಾರಿಗಳ ಪ್ರಕಾರ ಈ ರೀತಿಯ ಗುಂಪು ಸಾಮಾಜಿಕ ಜಾಲತಾಣ ಬಳಸಿಕೊಂಡು ರಾಜ್ಯಾದ್ಯಂತ ಸಕ್ರಿಯವಾಗಿದೆ.

ಮೊದಲು ಟೆಲಿಗ್ರಾಮ್ ಅಥವಾ ಮೆಸೆಂಜರ್ ಗ್ರೂಪ್‍ಗೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಒಬ್ಬರಿಗೊಬ್ಬರು ನಿರಂತರ ಸಂಪರ್ಕ ಸಾಧಿಸುತ್ತಾರೆ. ಮುಂದೆ ಅನೈತಿಕವಾದ ಸಂಗಾತಿ ವಿನಿಮಯ ಚಟುವಟಿಕೆಗಳು ನಡೆಯುತ್ತವೆ.

ಮಹಿಳೆ ದೂರು ಆಧರಿಸಿ ಇದೀಗ ಆಕೆಯ ಪತಿಯನ್ನು ಬಂಧಿಸಲಾಗಿದೆ.

ಈ ಚಟುವಟಿಕೆಯ ಹಿಂದೆ ದೊಡ್ಡ ಜಾಲವೇ ಇದೆ. ಸಂಗಾತಿ ವಿನಿಮಯ ಚರ್ಚೆ ನಡೆಯುತ್ತಿದ್ದ ಟೆಲಿಗ್ರಾಮ್ ನ ಒಂದು ಗುಂಪನ್ನು ಅಳಿಸಿ ಹಾಕಲಾಗಿದೆ. ಸುಮಾರು ಒಂದು ಸಾವಿರ ಜನ ಈ ಗುಂಪಿನಲ್ಲಿ ಸದಸ್ಯರಾಗಿದ್ದರು ಎಂದು ಹೇಳಲಾಗಿದೆ.

ತನಿಖೆಯ ಬಗ್ಗೆ ಮಾಹಿತಿ ನೀಡಿರುವ ಚಂಗಂಚೆರ್ರಿಯ ಡಿವೈಎಸ್‍ಪಿ ಆರ್.ಶ್ರೀಕುಮಾರ್ ಅವರು, ಶಿಕ್ಷಿತ ಹಾಗೂ ಸುಧಾರಿತ ಕುಟುಂಬಗಳ ಸದಸ್ಯರೇ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಹಲವಾರು ಮಂದಿಯ ಪೈಕಿ 25 ಜನರ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ಈ ಆರೋಪಿಗಳು ಅಲ್ಪುಂ, ಕೊಟ್ಟಾಯಂ, ಎರ್ನಾಕುಲಂ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ಈವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ, ಶೀಘ್ರವೇ ಕೃತ್ಯದಲ್ಲಿ ತೊಡಗಿದ್ದ ಮತ್ತಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.