(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ನ್ಯಾಯಾಧೀಶರು ಚಾಮರಾಜನಗರದ ಠಾಣೆಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಠಾಣೆ ಬಾಗಿಲು ಮುಚ್ಚಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರನ್ನು ಜಿಲ್ಲಾ ಪೊಲೀಸ್ ಅದೀಕ್ಷಕಿ ದಿವ್ಯ ಅವರು ಅಮಾನತು ಮಾಡಿದ್ದಾರೆ.
ಚಾಮರಾಜನಗರದ ಸಿಇಎನ್ (ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಅವರನ್ನು ಅಮಾನತುಪಡಿಸಲಾಗಿದೆ.
ಜನವರಿ 3 ರಂದು ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಸಿಇಎನ್ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದರು. ಆ ವೇಳೆ ಠಾಣೆಯ ಬಾಗಿಲು ಮುಚ್ಚಲಾಗಿತ್ತು.
ಈ ರೀತಿ ಠಾಣೆಗೆ ಬಾಗಿಲು ಹಾಕಿಕೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ, ಠಾಣೆಯ ಬಾಗಿಲು ಮುಚ್ಚಿದ್ದರೆ ದೂರು ಕೊಡಲು ಬರುವವರು ಏನು ಮಾಡಬೇಕು ಎಂದು ಎಸ್ಪಿಗೆ ನ್ಯಾಯಾಧೀಶರು ತವು ಭೇಟಿ ನೀಡಿದ್ದರ ಬಗ್ಗೆ ವರದಿ ಕೊಟ್ಟಿದ್ದರು.
ನ್ಯಾಯಾಧೀಶರ ವರದಿ ಗಮನಿಸಿ ಕರ್ತವ್ಯಲೋಪವಾಗಿರುವ ಹಿನ್ನೆಲೆಯಲ್ಲಿ ಎಸ್ ಪಿ ದಿವ್ಯ ಅವರು ಇನ್ಸ್ಪೆಕ್ಟರ್ ನಂಜಪ್ಪ ಅವರನ್ನು ಅಮಾನತು ಮಾಡಿ ಮುಂದಿನ ತನಿಖೆಗೆ ಆದೇಶಿಸಿದ್ದಾರೆ