ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಭಾರತದ ಭದ್ರತೆಯ ವಿಷಯ ಬಂದಾಗ ಅತೀ ಹೆಚ್ಚು ಕೇಳಿ ಬರುವ ವ್ಯಕ್ತಿ ಎಂದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರದು.
ಯುದ್ಧಕ್ಕಿಂತ ಮಿಗಿಲಾದ ಬುದ್ಧಿವಂತಿಕೆ, ಬರೀ ಕೌಶಲ್ಯಗಳಿಂದಲ್ಲೇ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಬಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ .ಅವರಿಗೆ 77 ನೇ ಹುಟ್ಟು ಹಬ್ಬದ ಸಂಭ್ರಮ.
ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಆಪತ್ತು ಬಂದಾಗಲೂ, ಸಾಗರೋತ್ತರ ರಾಷ್ಟ್ರಗಳಲ್ಲಿ ಭಾರತೀಯರ ಸಂಕಷ್ಟದಲ್ಲಿ ಸಿಲುಕಿಕೊಂಡಾಗಲೂ ದೋವಲ್ ತೆರೆಮರೆಯಲ್ಲಿ ನಿಂತು ಶ್ರಮಿಸುತ್ತಿದ್ದಾರೆ.
1945ರ ಜನವರಿ 20ರಂದು ಉತ್ತರಖಂಡ ರಾಜ್ಯದ ಪೌರಿ ಘರ್ವಾಲ್ ಜಿಲ್ಲೆಯ ಡೋವಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಒಬ್ಬ ಮಿಲಿಟರಿ ಅಧಿಕಾರಿಯಾಗಿದ್ದರು. ಡೋವಲ್ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಅಜ್ಮೀರ್ ನ ಜಾರ್ಜ್ ರಾಯಲ್ ಮಿಲಿಟರಿ ಸ್ಕೂಲ್ (ಈಗಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್) ನಲ್ಲಿ ಪೂರೈಸಿದರು.
1967ರಲ್ಲಿ ಆಗ್ರಾ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಹಾಗೂ 1968ರಲ್ಲಿ ಭಾರತೀಯ ಪೋಲೀಸ್ ಸೇವೆ (ಐ.ಪಿ.ಸ್)ಯ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು.
‘ಸೈಲೆಂಟ್ ಕಿಲ್ಲರ್’ ಎಂದೇ ಹೆಸರುವಾಸಿಯಾದ ದೋವಲ್ ಸರ್ಜಿಕಲ್ ಸ್ಟ್ರೈಕ್ನಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಮತ್ತು ರಾಜತಾಂತ್ರಿಕ ವಿದ್ಯಮಾನಗಳಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ.
ಪಂಜಾಬ್, ಮಿಜೋರಾಂ ಹಾಗೂ ಜಮ್ಮು – ಕಾಶ್ಮೀರದಲ್ಲಿ ಭುಗಿಲೆದ್ದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.
ಎಂಭತ್ತರ ದಶಕದಲ್ಲಿ ‘ಖಾಲಿಸ್ತಾನ್’ ಸ್ಥಾಪನೆಗಾಗಿ ಪಂಜಾಬಿನಾದ್ಯಂತ ಭಾರೀ ಪ್ರಮಾಣದ ಹಿಂಸಾಚಾರ ನಡೆದಿತ್ತು. ಇದರ ಭಾಗವಾಗಿ ಅಮೃತಸರದ ‘ಗೋಲ್ಡನ್ ಟೆಂಪಲ್’ಗೆ ಉಗ್ರರು 9 ಮೇ 1988ರಂದು ದಾಳಿ ಮಾಡಿ ನೂರಾರು ಸಾರ್ವಜನಿಕರನ್ನ ಒತ್ತೆಯಾಳುಗಳಾಗಿ ಬಂಧಿಸುತ್ತಾರೆ. ಆ ಒತ್ತೆಯಾಳುಗಳಲ್ಲಿ ರೊಮಾನಿಯಾ ದೇಶದ ರಾಯಭಾರಿಯೂ ಇರುತ್ತಾನೆ. ವಿಷಯ ತಿಳಿದ ಕೂಡಲೆ ರಾಷ್ಟ್ರೀಯಾ ರಕ್ಷಣಾ ಪಡೆಗಳು, NSG (National Security Guard) ಕಮಾಂಡೊಗಳು ಸ್ಥಳಕ್ಕೆ ದಾವಿಸುತ್ತಾರೆ.
1984ರಲ್ಲಿ ಇಂತಹುದೆ ಸನ್ನಿವೇಶ ಸಂಭವಿಸಿದಾಗ ರಕ್ಷಣಾ ಪಡೆಗಳ ಅಸಮರ್ಪಕ ಕಾರ್ಯಾಚರಣೆಯಿಂದಾಗಿ ನರಮೇಧವೇ ಆಗಿರುತ್ತದೆ. ಆದ್ದರಿಂದ ಈ ಸಲ ಸಾರ್ವಜನಿಕರ ಪ್ರಾಣ ಹಾನಿ ಆಗದಂತೆ ಕಾರ್ಯಾಚರಣೆ ಮಾಡುವಂತೆ ಕೇಂದ್ರ ಸರ್ಕಾರದ ಆದೇಶ ಬಂದಿರುತ್ತದೆ. ಈ ಆದೇಶ ಅಲ್ಲಿನ ಉನ್ನತ ರಕ್ಷಣಾಧಿಕಾರಿಗಳಿಗೆ ಇದ್ದ ಒತ್ತಡ ಇನ್ನಷ್ಟು ಹೆಚ್ಚಿಸುತ್ತದೆ. ಕಾರಣ ದೇವಸ್ಥಾನದಲ್ಲಿರುವ ಉಗ್ರರ ಸಂಖ್ಯೆ ಗೊತ್ತಿಲ್ಲ, ಉಗ್ರರು ಯಾವ ಯಾವ ಜಾಗದಲ್ಲಿದ್ದಾರೋ ಗೊತ್ತಿಲ್ಲ, ಉಗ್ರರ ಬಳಿ ಇರುವ ಆಯುಧಗಳ ಪ್ರಮಾಣ ಮತ್ತು ಅವುಗಳ ತೀವ್ರತೆಯ ಬಗ್ಗೆ ಮಾಹಿತಿ ಇಲ್ಲ. ಇವೆಲ್ಲದರ ಜೊತೆ ಗೃಹ ಇಲಾಖೆಯ ಆದೇಶ.
ಒಬ್ಬ ರಿಕ್ಷಾ ತುಳಿಯುವ ವ್ಯಕ್ತಿ ದೇವಸ್ಥಾನದ ಸುತ್ತಮುತ್ತಲು ಬೇಕಂತಲೆ ಓಡಾಡುತ್ತ, ಉಗ್ರರಿಗೆ ಸನ್ಹೆಗಳನ್ನು ಮಾಡುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತಿರುತ್ತಾನೆ. ಈ ವ್ಯಕ್ತಿ ಆ ಊರಿಗೆ ಹೊಸಬ. ಈತನ ಮೇಲೆ ಅನುಮಾನ ಬಂದು ಅವನನ್ನೆ ಹಿಂಬಾಲಿಸಿದ ಉಗ್ರರನ್ನು ಈ ವ್ಯಕ್ತಿಯೇ ಮಾತನಾಡಿಸುತ್ತಾನೆ.
ತಾನು ಪಾಕಿಸ್ತಾನದ ISI ಏಜೆಂಟ್, ನಿಮಗೆ ನೆರವು ನೀಡಲೆಂದು ನನ್ನನ್ನು ಕಳುಹಿಸಿದ್ದಾರೆ ಎಂದು ಪರಿಚಯಿಸಿಕೊಳ್ಳುತ್ತಾನೆ. ಉಗ್ರರು ಸಂತಸದಿಂದ ಈತನನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿ ಅವರ ಆಗಿನ ಪರಿಸ್ಥಿತಿ, ಮುಂದಿನ ಯೋಜನೆಗಳನ್ನು ತಿಳಿಸುತ್ತಾರೆ. ಮಾತುಕತೆಯ ನಂತರ ಆ ಉಗ್ರರಿಗೆ ಸ್ವಲ್ಪ ಹಣ ಕೊಟ್ಟು ಹೊರಬರುತ್ತಾರೆ.
ದೇವಸ್ಥಾನದಿಂದ ಹೊರಬಂದ ರಿಕ್ಷಾಚಾಲಕ ನೇರವಾಗಿ NIA ಕಮಾಂಡೊಗಳಿದ್ದಲ್ಲಿಗೆ ಬಂದು ತಕ್ಷಣ ಎಲ್ಲರೂ ಒಂದು ಕಡೆ ಸೇರುವಂತೆ ತಿಳಿಸುತ್ತಾರೆ. ಒಂದು ನಕ್ಷೆಯನ್ನು ಮುಂದಿಟ್ಟುಕೊಂಡು ಯಾವ ಯಾವ ಜಾಗದಲ್ಲಿ ಎಷ್ಟೆಷ್ಟು ಉಗ್ರರಿದ್ದಾರೆ, ಅವರ ಬಳಿ ಇರುವ ಶಸ್ತ್ರಾಸ್ತ್ರಗಳು, ಅವುಗಳ ತೀವ್ರತೆ, ಅವರ ಯೋಜನೆಗಳ ಜೊತೆ ಕಮಾಂಡೊಗಳು ಅನುಸರಿಸಬೇಕಾದ ಕಾರ್ಯತಂತ್ರವನ್ನೂ ವಿವರಿಸುತ್ತಾರೆ.
ಎಲ್ಲವನ್ನು ಕೇಳಿಸಿಕೊಂಡ ಕಮಾಂಡೊಗಳಿಗೆ ಈತ ಯಾರು ಎಂಬ ಪ್ರಶ್ನೆಯಾದರೆ, ಇವರ ಪರಿಚಯ ಇರುವವರಿಗೆ ಇಷ್ಟೆಲ್ಲಾ ಮಾಹಿತಿ ಇವರಿಗೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ.
ಹತ್ತು ದಿನಗಳ ನಂತರ 18 ಮೇ 1988ರಂದು ಕೊನೆಗೂ ‘ಆಪರೇಷನ್ ಬ್ಲ್ಯಾಕ್ ಥಂಡರ್’ ಯಶಸ್ವಿಯಾಗಿ ಅಂತ್ಯಗೊಳಿಸಲಾಗುತ್ತೆ. ಎರಡು ನೂರು ಉಗ್ರರು ಶರಣಾಗುತ್ತಾರೆ, 41 ಉಗ್ರರ ಪ್ರಾಣ ಪಕ್ಷಿ ಗಾಳಿಯಲ್ಲಿ ಹಾರಿಹೋಗಿರುತ್ತದೆ.
ಈ ಯಶಸ್ವಿ ಕಾರ್ಯಾಚರಣೆಯ ರುವಾರಿ ರಿಕ್ಷಾ ಚಾಲಕ ಭಾರತದ ಜೇಮ್ಸ್ ಬಾಂಡ್ ಅಜಿತ್ ದೊವಲ್ ಅವರಿಗೆ ಭಾರತ ಸರ್ಕಾರ ಪ್ರತಿಷ್ಟಿತ ‘ಕೀರ್ತಿ ಚಕ್ರ’ ಪ್ರಶಸ್ತಿ ಕೊಟ್ಟು ಗೌರವಿಸುತ್ತದೆ.
ಜೇಮ್ಸ್ ಬಾಂಡ್ ಅಂತ ಅಜಿತ್ ದೊವಲ್ ಅವರನ್ನು ಕರೆಯುವುದು ಏಕೆಂದರೆ ದೊವಲ್ ಪಾಕಿಸ್ತಾನದ ಲಾಹೊರ್ ನಲ್ಲಿ ಮುಸ್ಲಲ್ಮಾನನಂತೆ ವೇಷ ಬದಲಿಸಿಸಿಕೊಂಡು ಬರೂಬ್ಬರಿ 7 ವರ್ಷ ಗೂಢಚಾರಿಯಂತೆ ಕೆಲಸ ಮಾಡಿದ್ದಾರೆ.
ಆ ಸಮಯದಲ್ಲಿ ಪಾಕಿಸ್ತಾದ ಅಣ್ವಸ್ತ್ರದ ಕುರಿತಾದ ಮಹತ್ವದ ಸಂಗತಿಗಳನ್ನು ಭಾರತ ಸರ್ಕಾರಕ್ಕೆ ರವಾನೆ ಮಾಡಿದ್ದಾರೆ. ಪಾಕಿಸ್ತಾನದ ವಿಪರ್ಯಾಸವೋ ಏನೋ ಗೂಢಚಾರಿಯಂತೆ ಕೆಲಸ ಮಾಡಿದ ನಂತರ ಅದೇ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಛೇರಿಯಲ್ಲಿ ಕೂಡ ಅಜಿತ್ ದೊವಲ್ ಕಾರ್ಯ ನಿರ್ವಹಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ಜೊತೆಯಲ್ಲೆ, ಉಗ್ರರನ್ನು ಮನವೊಲಿಸಿ ಭಾರತದ ಪರವಾಗಿ ಪಾಕಿಸ್ತಾನದ ವಿರುದ್ಧ ಕೆಲಸ ಮಾಡುವ ಹಾಗೆ ಮಾಡಿರುವ ಕೀರ್ತಿ ಕೂಡ ಅಜಿತ್ ದೊವಲ್ ಅವರಿಗೆ ಸಲ್ಲಬೇಕು.
ರಕ್ಷಣಾ ವಿಶ್ಲೇಷಕರ ಅಂದಾಜಿನ ಪ್ರಕಾರ ದಕ್ಷಿಣ ಏಷಿಯಾಕ್ಕೆ ಸಂಬಂಧಿಸಿದಂತೆ ಭಯೋತ್ಪಾದನೆ, ಆಂತರಿಕ ರಕ್ಷಣೆ, ಗೂಢಚಾರಿಗಳ ಸಮೂಹಗಳ ಬಗ್ಗೆ ಇಂಟರ್ ಪೋಲ್ ಮತ್ತು ಚೀನಾಗಿಂತ ಹೆಚ್ಚಿನ ಮಾಹಿತಿ ಅಜಿತ್ ದೊವಲ್ ಅವರ ಬಳಿ ಇದೆಯಂತೆ.
1999ರಲ್ಲಿ ಕಂದಹಾರ್ ವಿಮಾನ ಅಪಹರಣವಾದಾಗಲೂ ಮುಖ್ಯ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದರು. ಒಟ್ಟಾರೆಯಾಗಿ 1971ರಿಂದ 1999ರ ಮಧ್ಯೆ 15ರಷ್ಟು ಹೈಜ್ಯಾಕ್ ಪ್ರಯತ್ನಗಳನ್ನು ತಡೆದಿದ್ದಾರೆ.
ಅಜಿತ್ ದೊವಲ್ 2005ರಲ್ಲಿ ಇಂಟೆಲಿಜೆನ್ಸ್ ಬ್ಯೂರೊ ಮುಖ್ಯಸ್ಥರಾಗಿದ್ದಾಗ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ದುಬೈನಲ್ಲಿ ಮುಗಿಸಲು ರೂಪಿಸಿದ್ದ ಯೋಜನೆಯನ್ನು ಮುಂಬೈನ ಪೊಲೀಸ್ ಇನ್ಸ್ಪೆಕ್ಟರ್ ‘ಅಸ್ಲಾಂ ಮೊಮಿನ್’ ಶತ್ರುಗಳಿಗೆ ತಿಳಿಸದಿದ್ದರೆ ಇಷ್ಟೊತ್ತಿಗಾಗಲೆ ದಾವೂದ್ ದಿವಂಗತನಾಗುತ್ತಿದ್ದ.
ಯುಕೆಯಲ್ಲೂ ಭಾರತದ ರಾಯಭಾರಿಯಾಗಿಯೂ ಕೆಲಸ ನಿರ್ವಹಿಸಿರುವ ದೋವಲ್ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ನಿವೃತ್ತಿ ಪಡೆದರು.
2014ರ ಮೇ 30ರಂದು ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ನೇಮಕಗೊಂಡರು.
ಜೂನ್ 2014ರಲ್ಲಿ ಇರಾಕಿನ ತಿರ್ಕಿಟ್ ನಲ್ಲಿ ಐಎಸ್ಐಎಸ್ ಉಗ್ರರ ಬಳಿ ಸಿಲುಕಿದ್ದ ಭಾರತದ ನರ್ಸ್ ಗಳನ್ನು ಭಾರತಕ್ಕೆ ಕರೆತರುವಲ್ಲಿ ಅಜಿತ್ ಪಾತ್ರ ಹಿರಿದಾಗಿತ್ತು. ರಹಸ್ಯ ಕಾರ್ಯಾಚರಣೆ ನಡೆಸಿ, ಇರಾಕಿನ ಉನ್ನತ ಅಧಿಕಾರಿಗಳ ನೆರವಿನಿಂದ ಉಗ್ರರ ಕಪಿಮುಷ್ಟಿಯಿಂದ ನರ್ಸ್ ಗಳನ್ನು ಇಲ್ಲಿಗೆ ಕರೆತಂದರು.ಆದರೆ ಇಂದಿಗೂ ದೋವಲ್ ಮಾಡಿದ ಸಂಧಾನ ಮಾತುಕತೆ ಏನಾಗಿತ್ತು ಎಂಬುದು ಅಷ್ಟೇ ನಿಗೂಢ.
ಅತ್ಯಂತ ಧೈರ್ಯಶಾಲಿ ದೋವಲ್ ತಮ್ಮ ಚಾಣಾಕ್ಷ್ಯ ಬುದ್ಧಿಯಿಂದಲೇ ದೇಶದ ಭದ್ರತೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 2016ರಲ್ಲಿ ಉರಿ ದಾಳಿಗೆ ಪ್ರತೀಕಾರವಾಗಿ ನಡೆಸಿದ ಮೊದಲ ಸರ್ಜಿಕಲ್ ಸ್ಟ್ರೈಕ್ ಹಾಗೂ 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ನಿಯಂತ್ರಣ ಗಡಿ ದಾಟಿ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲೂ ಮಾಸ್ಟರ್ಮೈಂಡ್ ಅವರೇ.
ಪಾಕ್ ವಿರುದ್ಧದ ಸರ್ಜಿಕಲ್ ದಾಳಿಯ ನೀಲನಕ್ಷೆ ರೂಪಿಸಿದ್ದೂ ಇದೇ ದೋವಲ್. ಸೆಪ್ಟೆಂಬರ್ 29ರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರೇಸ್ಕೋರ್ಸ್ ರಸ್ತೆಯಲ್ಲಿರುವ ತನ್ನ ನಿವಾಸದಲ್ಲಿ ಕಾತರದಿಂದ, ದುಗುಡದಿಂದ ಒಂದು ದೂರವಾಣಿ ಕರೆಗಾಗಿ ಕಾಯುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ.
ಸರಿಯಾಗಿ 4 ಗಂಟೆ, 32 ನಿಮಿಷಕ್ಕೆ ಪ್ರಧಾನಿ ಬಳಸುವ ರಾಕ್ಸ್ ದೂರವಾಣಿಗೆ ಮಿಲಿಟರಿ ಕಂಟ್ರೋಲ್ ರೂಂನಿಂದ ದೂರವಾಣಿ ಕರೆ ಬಂದಾಗ, ಆ ಕಡೆಯಿಂದ ಕೇಳಿಬಂದ ಸುದ್ದಿ ತಿಳಿದು ಪ್ರಧಾನಿ ನಿರಾಳರಾಗುತ್ತಾರೆ.
ಪ್ರಧಾನಿಗೆ ದೂರವಾಣಿ ಕರೆ ಮಾಡಿದವರು ದೇಶದ ಭದ್ರತಾ ಸಲಹೆಗಾರ ಅಜಿತ್ ದೋವಲ್. ಆ ವೇಳೆ ದೋವಲ್, ಪ್ರಧಾನಿ ಮೋದಿಗೆ ಹೇಳಿದ ಒಂದು ವಾಕ್ಯವಿದು: ‘‘ಮಿಷನ್ ಯಶಸ್ವಿಯಾಗಿದೆ, ಹುಡುಗರು ಸುರಕ್ಷಿತವಾಗಿ ಮರಳಿದ್ದಾರೆ.” ಖುಷಿಯಿಂದ, ‘‘ವೆಲ್ಡನ್ ಅಜಿತ್,” ಎಂದು ಅಭಿನಂದಿಸಿದ ಮೋದಿ, ಮರುಕ್ಷಣ ಫೋನಾಯಿಸಿದ್ದು ವಿದೇಶಾಂಗ ಕಾರ್ಯದರ್ಶಿ ಎಸ್ ಜಯಶಂಕರ್ ಅವರಿಗೆ.
ಬೆಳಗಿನ ಒಂಬತ್ತು ಗಂಟೆಯೊಳಗೆ ವಿಶ್ವದ ಪ್ರಮುಖ ಮೂವತ್ತು ರಾಷ್ಟ್ರಗಳ ಮುಖ್ಯಸ್ಥರಿಗೆ ದಾಳಿಯ ಅನಿವಾರ್ಯತೆ ತಿಳಿಸಿಯಾಗಿತ್ತು.
ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ರಜೋರಿಯಲ್ಲಿ ಶೆಲ್ ದಾಳಿ ಆರಂಭಿಸಿದಾಗ, ‘‘ಒಂದು ಗುಂಡಿಗೆ ಎರಡು ಗುಂಡು ಹಾರಿಸಿ,” ಎಂದು ಬಿಎಸ್ಎಫ್ ಮುಖ್ಯಸ್ಥರಿಗೆ ಆದೇಶ ನೀಡಿ ನಿದ್ದೆಗೆ ಜಾರಿದ್ದರು. ಮೂರು ದಿನಗಳಿಂದ ನಿದ್ದೆ ಮಾಡಿರದ ಅಜಿತ್ ದೋವಲ್. ಉರಿ ದಾಳಿ ನಡೆದ ದಿನವೇ ಪ್ರತಿದಾಳಿ ನಡೆಸಲು ತೀರ್ಮಾನಿಸಿದ್ದ ಪ್ರಧಾನಿ ಮೋದಿ, ಸರ್ಜಿಕಲ್ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿ ಹೊರಿಸಿದ್ದೇ ಈ ಅಜಿತ್ ದೋವಲ್ ಎಂಬ ಮೇಧಾವಿಗೆ.
ಪಾಕಿಸ್ತಾನದಲ್ಲಿ 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಹಾಗು 2019ರ ಏರ್ಸ್ಟ್ರೈಕ್ ನಂತರ ದೋವಲ್ ಅವರನ್ನು ಪಾಕ್ ಉಗ್ರರು ಹಿಟ್ ಲಿಸ್ಟ್ನಲ್ಲಿ ಇಟ್ಟಿದ್ದಾರೆ.
2017ರಲ್ಲಿ ಚೀನಾ ಜತೆಗಿನ ಡೋಕ್ಲಾಮ್ ಗಡಿ ವಿವಾದ ಬಿಕ್ಕಟ್ಟು ಬಗೆ ಹರಿಸುವಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.
ತಿಂಗಳುಗಟ್ಟಲೆ ದೇಶದ ಆತಂಕಕ್ಕೆ ಕಾರಣವಾಗಿದ್ದ, ಜಗತ್ತೇ ಚೀನಾ ಭಾರತ ಯುದ್ದವೇ ಸಂಭವಿಸಬಹುದು ಎಂಬ ಭಾವಿಸಿದ ಸಂದರ್ಭದಲ್ಲಿ ಮಾತುಕತೆಯ ಮೂಲಕವೇ ಬಿಕ್ಕಟ್ಟು ನಿರ್ವಹಣೆ ಮಾಡಿದವರು ಡೋವಲ್ ಅವರು.
ದೋವಲ್ ಸೇವೆಗೆ ಗೌರವಾರ್ಥವಾಗಿ ಭಾರತೀಯ ಸರಕಾರ ಕೀರ್ತಿ ಚಕ್ರ ನೀಡಿ ಗೌರವಿಸಿದೆ. ಈ ಮೂಲಕ ಕೀರ್ತಿ ಚಕ್ರ ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
ಮಲ್ಟಿ ಏಜೆನ್ಸಿ ಸೆಂಟರ್ ಹಾಗೂ ಜಾಯಿಂಟ್ ಟಾಸ್ಕ್ ಫೋರ್ಸ್ ಆನ್ ಇಂಟೆಲಿಜೆನ್ಸ್ನ ಮುಖ್ಯಸ್ಥ ಹಾಗೂ ಸ್ಥಾಪಕರೂ ಕೂಡಾ ಅವರೇ.
ನಿವೃತ್ತರಾದ ನಂತರ ದೇಶ ವಿದೇಶಗಳಲ್ಲಿ ಕೌಂಟರ್ ಟೆರರಿಸಮ್, ಇಂಟರ್ನಲ್ ಸೆಕ್ಯೂರಿಟಿ, ಫೇಕ್ ಕರೆನ್ಸಿ ಬಗ್ಗೆ ಹತ್ತಾರು ಉಪನ್ಯಾಸಗಳನ್ನು ಕೊಟ್ಟು 2009ರಲ್ಲಿ “ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್”(ವಿಐಎಫ್)ನ ಸ್ಥಾಪನೆ ಮಾಡಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಹೆಗ್ಗಳಿಕೆ ಅಜಿತ್ ದೊವಲ್ ಅವರಿಗೆ ಸೇರಬೇಕು.
ಇಂತಹ ದಕ್ಷ ಹಾಗೂ ಚಾಣಕ್ಷ ಭದ್ರತಾ ಸಲಹೆಗಾರ ನಮ್ಮ ದೇಶಕ್ಕೆ ದೊರೆತಿರುವುದು ಭಾರತೀಯರ ಹೆಮ್ಮೆ ಸಂಗತಿಯಾಗಿದೆ.