ಕೇಂದ್ರ ಸರ್ಕಾರದ ನಿರ್ಧಾರ ಸಾಂವಿಧಾನ ಬದ್ಧ ಎಂದ ಸುಪ್ರೀಂಕೋರ್ಟ್

ನವದೆಹಲಿ:ಪ್ರಸಕ್ತ ಸಾಲಿನ ವೈದ್ಯಕೀಯ ಶಿಕ್ಷಣ ಪ್ರವೇಶದ ವೇಳೆ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಶೇ.10ರಷ್ಟು ಮೀಸಲಾತಿ ಪಾಲನೆ ಮಾಡಬೇಕೆಂಬ ವಿಚಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ರಾಜ್ಯ ಸರ್ಕಾರಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು ಜನವರಿ 7ರಂದು ನೀಡಲಾದ ಆದೇಶವನ್ನು ಎತ್ತಿ ಹಿಡಿದಿದೆ.

2021-22ರ ಎನ್‍ಇಇಟಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಯನ್ನು ಅನುಮತಿಸುವ ಕೇಂದ್ರ ಸರ್ಕಾರದ ನಿರ್ಧಾರ ಸಾಂವಿಧಾನ ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಅಧಿಕೃತ ಮುದ್ರೆ ಒತ್ತಿದೆ.

ಹೆಚ್ಚಿನ ಅಂಕಗಳು ಅರ್ಹತೆಯ ಏಕೈಕ ಮಾನದಂಡವಲ್ಲ,ಜೇಷ್ಠತೆ ಪರಿಗಣನೆಯ ವೇಳೆ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಸಂದರ್ಭೋಚಿತವಾಗಿ ಗಣನೆಗೆ ತೆಗೆದುಕೊಳ್ಳಬೇಕು.

ಮೀಸಲಾತಿಯು ಅರ್ಹತೆಗೆ ವಿರುದ್ಧವಾಗಿಲ್ಲ, ಬದಲಾಗಿ ಸಾಮಾಜಿಕ ನ್ಯಾಯದ ಪರಿಣಾಮಗಳನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

ಎಂಟು ಲಕ್ಷ ವಾರ್ಷಿಕ ಆದಾಯ ಹೊಂದಿರುವ ಆರ್ಥಿಕ ದುರ್ಬಲ ವರ್ಗದವರು ಈ ಬಾರಿ ಎನ್‍ಇಇಟಿ-ಸ್ನಾತಕೋತ್ತರ ಪ್ರವೇಶಕ್ಕೆ ಮೀಸಲಾತಿಯಡಿ ಅರ್ಹರಾಗಿರುತ್ತಾರೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ವೈದ್ಯಕೀಯ ಶಿಕ್ಷಣ ಕೋರ್ಸ್ ನ ಪ್ರವೇಶದ ಈ ಹಂತದಲ್ಲಿ ನ್ಯಾಯಾಂಗದ ಹಸ್ತಕ್ಷೇಪವು ಪ್ರವೇಶಾತಿಯನ್ನು ವಿಳಂಬಗೊಳಿಸುತ್ತದೆ.

ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯದಲ್ಲಿರುವ ಸಂದರ್ಭದಲ್ಲಿ ನ್ಯಾಯಾಲಯ ವೈದ್ಯಕೀಯ ಕೋರ್ಸ್‍ಗೆ ತಡೆ ನೀಡಿದರೆ, ವೈದ್ಯರ ಕೊರತೆಯಾಗಲಿದೆ, ಕೋವಿಡ್ ಹೆದರಿಸಲು ಇದರಿಂದ ಹಿನ್ನೆಡೆಯಾಗಲಿದೆ. ಆದ್ದರಿಂದ 2021-22 ಸಾಲಿನ ಮೀಸಲಾತಿ ಮಾನದಂಡಗಳ ಕುರಿತು ಯಾವುದೇ ತಡೆ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸದೆ ಮತ್ತು ಬಡವರು ಹಾಗೂ ಕಡುಬಡವರ ಮೀಸಲಾತಿ ನಿರ್ಧರಣೆಯ ಪುರಾವೆಗಳನ್ನು ಪರಿಗಣಿಸದೆ ಶೈಕ್ಷಣಿಕ ಮೀಸಲಾತಿ ಅರ್ಹತೆ ಕುರಿತು ಏಕಾಏಕಿ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ ಎಂದು ನ್ಯಾಯ ಪೀಠ ಹೇಳಿದೆ.