ಕಾಂಗ್ರೆಸ್ ಗೆದ್ದಲು ಹಿಡಿದ ಮರವಿದ್ದಂತೆ; ಈಶ್ವರಪ್ಪ ವಾಗ್ದಾಳಿ

ಚಿಕ್ಕಮಗಳೂರು:ಕಾಂಗ್ರೆಸ್ ಪಕ್ಷ ಗೆದ್ದಲು ಹಿಡಿದ ಮರವಿದ್ದಂತೆ ಇನ್ನೇನು ನೆಲಕಚ್ಚುವ ಸ್ಥಿತಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಈ ಗೆದ್ದಲು ಹಿಡಿದ ಮರವನ್ನು ರಾಜ್ಯದಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಕೈಗಳಿಗೆ ನೀಡಿದ್ದು ಅವರು ಮರ ನೆಲಸಮ ಮಾಡುತ್ತಾರೆ ಎಂದು ವ್ಯಂಗ್ಯ ವಾಡಿದರು.

ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ, ಜೆಡಿಎಸ್ ಪಕ್ಷದಲ್ಲಿದ್ದು ಯಾವುದೇ ಅಧಿಕಾರ ಸಿಗದೆ ಇದ್ದಾಗ ಕಾಂಗ್ರೆಸ್ ಪಕ್ಷ ಸೇರಿದರು. ಮುಖ್ಯಮಂತ್ರಿ ಇಲ್ಲವೇ ವಿರೋಧಪಕ್ಷದ ನಾಯಕ ಪಟ್ಟ ಇರಬೇಕು ಇಲ್ಲದಿದ್ದರೆ  ಕಾಂಗ್ರೆಸ್ಸನ್ನು ತೊರೆಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಈಶು ಪ್ರತಿಕ್ರಿಯಿಸಿದರು.

ಬೇರೆ,ಬೇರೆ ರಾಜಕೀಯ ಪಕ್ಷಗಳಲ್ಲಿ ಬೇರೆಬೇರೆ ಜಿಲ್ಲೆಯವರು ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದ ಉದಾಹರಣೆಗಳಿವೆ.ಕಾಂಗ್ರೆಸ್  ಆಡಳಿತದ ಸಂದರ್ಭದಲ್ಲೂ ಹೀಗೆ ಆಗಿದ್ದಿದೆ ಎಂದರು.

ನಾನು ಈ ಜಿಲ್ಲೆಗೆ ಎರಡು ಬಾರಿ ಉಸ್ತುವಾರಿ ಸಚಿವನಾಗಿದ್ದೆ ಈಗ ಮೂರನೇ ಬಾರಿ ಉಸ್ತುವಾರಿ ಸಚಿವ ನಾಗಿದ್ದೇನೆ ಎಂದು ಹೇಳಿದರು.

ಮೇಕೆದಾಟು ವಿಚಾರ ಮುಗಿಸಿ ಈಗ ಮಹದಾಯಿ ವಿಚಾರವಾಗಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಈ ಹಿಂದೆ ಸೋನಿಯಾ ಗಾಂಧಿ ಭೇಟಿ ಮಾಡಿ ಗೋವಾ ಸರ್ಕಾರ ಜೊತೆ ಮಾತನಾಡಲು ತಿಳಿಸಿದ್ದರು. ಆಗ ನೀರು ಬಿಡುವುದಾಗಿ ಹೊರಬಂದು ಪತ್ರಿಕಾ ಹೇಳಿಕೆ ನೀಡಿದ್ದರು,ಆ ಪತ್ರಿಕಾ ಪ್ರತಿ ನನ್ನ ಬಳಿ ಇದೆ ಎಂದು ಈಶ್ವರಪ್ಪ ತಿಳಿಸಿದರು.

ಸ್ವಲ್ಪ ಸಮಯದಲ್ಲಿ ಗೋವಾ ಚುನಾವಣೆ ಬಂದಾಗ ಇದೇ ಸೋನಿಯಾಗಾಂಧಿ ಚುನಾವಣಾ ಪ್ರಚಾರದಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡಬಾರದು ಎಂದು ಹೇಳಿದ್ದರು.ಗೋವಾ ಜನತೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಣೆ ಮಾಡಿದ್ದರು. ಈಗ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಫೆಬ್ರವರಿ 15ನೇ ತಾರೀಕು ಚಿಕ್ಕಮಗಳೂರು ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.