ಸಿದ್ದರಾಮಯ್ಯ, ಸುಳ್ಳು ರಾಮಯ್ಯ ಯಾವ ಪಕ್ಷದ ಬಾಲಂಗೋಚಿ? -ಹೆಚ್ ಡಿಕೆ

ಬೆಂಗಳೂರು: ಬಿಜೆಪಿ ಪಕ್ಷದ ಅನೇಕ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ಸಿದ್ದರಾಮಯ್ಯ ಸ್ವತಃ ಅವರು ಯಾವ ಪಕ್ಷದ ಬಾಲಗೋಚಿ ಎನ್ನುವುದು ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.

ಜೆಡಿಎಸ್ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕೆಲ ಶಾಸಕರು ಕಾಂಗ್ರೆಸ್ಸಿಗೆ ಅರ್ಜಿ ಹಾಕಿಕೊಂಡಿದ್ದಾರೆಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಿಂದಲೂ ನಮ್ಮಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ನಮ್ಮ ಬಳಿಗೆ ಬರುವವರು ಸಣ್ಣಪುಟ್ಟ ಮುಖಂಡರು. ಅನೇಕ ಹೊಸಬರು ಜೆಡಿಎಸ್ ಪಕ್ಷಕ್ಕೆ ಬರಲು ರೆಡಿ ಇದ್ದಾರೆ ಎಂದು ಅವರು ಹೇಳಿದರು.

ನಮ್ಮ ಪಕ್ಷಕ್ಕೆ ಸಿದ್ದರಾಮಯ್ಯ ಕೊಡುಗೆ ಯಾವತ್ತೂ ಏನೂ ಇರಲಿಲ್ಲ. ಇಲ್ಲಿ ಮಜಭೂತಾಗಿ ಅಧಿಕಾರ ಅನುಭವಿಸಿ ಹೋದರು. ಸಿದ್ದರಾಮಯ್ಯ ಇದ್ದಾಗಲೂ ನಮ್ಮ ಪಕ್ಷದ ಮತ ಗಳಿಕೆ ಪ್ರಮಾಣ ಶೇ.19. ಅವರು ಪಕ್ಷ ಬಿಟ್ಟ ಮೇಲೆಯೂ ಶೇ.19 ಮತ ಪಾಲು ಇದೆ. ಅವರಿದ್ದಾಗ 58 ಸೀಟು ಗೆದ್ದಿದೆವು. ಅವರು ಪಕ್ಷ ತೊರೆದ ಮೇಲೆ ಒಮ್ಮೆ 20 ಸೀಟು, ಇನ್ನೊಮ್ಮೆ 40 ಸೀಟು ಗೆದ್ದಿದ್ದೇವೆ. ಇದಕ್ಕೆ ಕಾರಣ ನಮ್ಮ ಕಾರ್ಯಕರ್ತರು ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಜೆಡಿಎಸ್ ಪಕ್ಷ ಬಿಜೆಪಿಯ ಬಾಲಂಗೋಚಿ ಎನ್ನುವ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ಅನೇಕ ಬಾರಿ ಪ್ರಶ್ನೆ ಕೇಳಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪ್ರಥಮ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ ತಾವಿದ್ದ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲಿಕ್ಕೆ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೆ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡರು? ಆ ಹಣವನ್ನು ಯಾರಿಂದ ತರಿಸಿಕೊಂಡರು? ಹಣ ತಂದುಕೊಟ್ಟವರು ಯಾರು? ಎಂದು ಕೇಳಿದ್ದೆ. ಇವತ್ತಿಗೂ ಅವರಿಂದ ಉತ್ತರವಿಲ್ಲ. ಹಾಗಾದರೆ ಸಿದ್ದರಾಮಯ್ಯ ಯಾವ ಪಕ್ಷದ ಬಾಲಂಗೋಚಿ? ಯಾರ ಬಾಲಂಗೋಚಿ? ಎಂದು ಕುಮಾರಸ್ವಾಮಿ ಅವರು ಕೇಳಿದರು.

ಆಶ್ರಯ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿದ ವ್ಯಕ್ತಿ, ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತೆಗೆಯುವ ಹುನ್ನಾರ ನಡೆಸಿದ ವ್ಯಕ್ತಿ ಸಿದ್ದರಾಮಯ್ಯ ಎನ್ನುವುದು ನನಗೆ ಗೊತ್ತಿದೆ. ಹಣ ತಂದ ವ್ಯಕ್ತಿಯೇ ಸ್ವತಃ ನನ್ನ ಬಳಿಯೇ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡು ಬಂದೆ? ಎಂದು ಹೇಳಿದ್ದಾರೆ. ಆಗ ಕಾಂಗ್ರೆಸ್ ಪಕ್ಷದ ನಾಯಕರನ್ನು ಮುಗಿಸಲು ಏನೆಲ್ಲಾ ಮಾಡಿದಿರಿ? ಎಷ್ಟೆಲ್ಲ ಹಣ ಬಂತು. ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ. ಅದಕ್ಕೆ ನಾನು ಸುಳ್ಳು ರಾಮಯ್ಯ ಅನ್ನೋದು. ಅವರೇನು ಸತ್ಯಹರಿಶ್ಚಂದ್ರರಲ್ಲ, ಅದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಇನ್ನು ಈ ಸರಕಾರದಲ್ಲಿ ನಡೆಯುವಷ್ಟು ಕಮೀಷನ್ ವ್ಯವಹಾರ ಬೇರೆ ಯಾವ ಸರಕಾರದಲ್ಲೂ ನಡೆದಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಜನರ ಮುಂದೆ ಸತ್ಯ ಹರಿಶ್ಚಂದ್ರನ ಪೆÇೀಸು ನೀಡುತ್ತಾರೆ. ಆದರೆ, ಸಿದ್ದರಾಮಯ್ಯ ಸರಕಾರದ ಕಾಲದಲ್ಲಿ ನಡೆದ ಅರ್ಕಾವತಿ ಹಗರಣ ಈಗ ಬಿಜೆಪಿ ಸರಕಾರದಲ್ಲಿ ನಡೆದಿರುವ ಎಲ್ಲ ಅಕ್ರಮಗಳಿಗೂ ಸರಿದೂಗುವುದಿಲ್ಲ. ಇಂಥ ವ್ಯಕ್ತಿಯನ್ನು ನೋಡಿದರೆ ನಮಗೆ ಭಯವಂತೆ, ನಾವು ಬಹಳ ಜನರನ್ನು ನೋಡಿದ್ದೇವೆ. ನಾವು ಭಯ ಬೀಳುವುದು ರಾಜ್ಯದ ಜನರಿಗೆ ಮಾತ್ರ. ಸಿದ್ದರಾಮಯ್ಯ ಅವರನ್ನು ನೋಡಿ ಹೆದರುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ಅವರು 16 ಮಂದಿಯನ್ನು ಸಿದ್ಧ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಜೆಡಿಎಸ್ ಗೆ ನಾವು ಕೈಹಾಕಲ್ಲ ಎಂದಿದ್ದಾರೆ. ನಮ್ಮ ಮೇಲೆ ಅಷ್ಟಾದರೂ ಅವರು ಕನಿಕರ, ಗೌರವ ಇಟ್ಟಿದ್ದಾರೆ. ಅವರಿಗೆ ವಿಶೇಷವಾಗಿ ನಮ್ಮ ಪಕ್ಷ, ಕಾರ್ಯಕರ್ತರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು ಕುಮಾರಸ್ವಾಮಿ ಅವರು.

ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯ ಟಿ.ಎ.ಸರವಣ, ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್ ಮುಂತಾದವರು ಇದ್ದರು.