ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನನ್ನು ಕಬಳಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲು ಸರ್ಕಾರ ಅನುಮತಿ ನೀಡಿದೆ.
40 ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲು ಅನುಮತಿ ಕೇಳಿದ್ದ ಎಸಿಬಿಗೆ ರಾಜ್ಯ ಸರ್ಕಾರ 25 ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಲು ಅನುಮತಿ ನೀಡಿದೆ.
ಇದರಿಂದಾಗಿ ಎಸಿಬಿ ದಾಳಿ ವೇಳೆ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದ ನುಂಗಣ್ಣರಿಗೆ ಬಂಧನದ ಭೀತಿ ಎದುರಾಗಿದೆ. ದಾಳಿ ವೇಳೆ ಸುಮಾರು 200 ಕೋಟಿಗೂ ಅಧಿಕ ಅವ್ಯವಹಾರವನ್ನು ಎಸಿಬಿ ಪತ್ತೆ ಮಾಡಿತ್ತು. ಕಳೆದ ವರ್ಷ ಎಸಿಬಿ ಬಿಡಿಎ ಕಚೇರಿ ಮೇಲೆ ಬೃಹತ್ ದಾಳಿ ನಡೆಸಿತ್ತು.
ಸದ್ಯ ಬೇರೆ ಬೇರೆ ಕಡೆ ವರ್ಗಾವಣೆಯಾಗಿರುವ ಅಧಿಕಾರಿಗಳು ಸೇರಿದಂತೆ ಕೆಎಸ್ಎ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಎಫ್ಡಿಎ ಅಧಿಕಾರಿಗಳು ಸೇರಿ 25 ಭ್ರಷ್ಟ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಲಿದೆ.
ಉಪಕಾರ್ಯದರ್ಶಿಗಳ ಕಚೇರಿ, ವಿಶೇಷ ಭೂಸ್ವಾಧೀನ ಮತ್ತಿತರರ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಒಂದೇ ಆಸ್ತಿಯಲ್ಲಿ ವಿವಿಧ ವ್ಯಕ್ತಿಗಳಿಗೆ ದಾಖಲೆ ನೀಡಿರುವುದು ಪತ್ತೆಯಾಗಿದೆ.
ಕೆಆರ್ ಪುರಂನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ 35 ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದ್ದವು. ಅರ್ಕಾವತಿ ಲೇಔಟ್, ಕೆಂಪೇಗೌಡ ಲೇಔಟ್, ಚಂದ್ರಾ ಲೇಔಟ್ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಬಿಡಿಎ ನಿವೇಶನ ಹಂಚಿಕೆ ಮಾಡಿರುವುದನ್ನು ಕೂಡಾ ಅಧಿಕಾರಿಗಳು ಪತ್ತೆ ಮಾಡಿದ್ದರು.