ಬೆಂಗಳೂರು:ರಾಜ್ಯ ಸರಕಾರದ ಮಹತ್ವಾಕಂಕ್ಷೆಯ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿ ಗಳ ಆಯ್ಕೆಗೆ ಇರುವ ವಾರ್ಷಿಕ ವರಮಾನ ಮಿತಿಯನ್ನು ೧.೨೦ ಲಕ್ಷಕ್ಕೆ ಹೆಚ್ಚಿಸಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತನಾಡಿದ ಸಚಿವರು, ವರಮಾನ ಮಿತಿ ಹೆಚ್ಚಿಸುವಂತೆ, ವಸತಿ ವಂಚಿತ ಬಡವರು ಮನವಿ ಸಲ್ಲಿಸುತ್ತಲೇ ಬಂದಿದ್ದು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರವು ಬಿ ಪಿ ಎಲ್ ಕಾರ್ಡುದಾರರ ವರಮಾನ ಮಿತಿಯನ್ನು ೧.೨೦ ಲಕ್ಷಕ್ಕೆ ಈಗಾಗಲೇ ಹೆಚ್ಚಿಸಿದೆ. ಆದರೆ ರಾಜ್ಯದಲ್ಲಿ ಆಶ್ರಯ ಯೋಜನೆ ಫಾನುಭವಿಗಳಿಗೆ ವರಮಾನ ಮಿತಿ ೩೨೦೦೦ ದಷ್ಟಿದ್ದು, ಹೆಚ್ಚಿನ ಅರ್ಹರು ಯೋಜನೆಯ ಲಾಭ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ತಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು, ಸರಕಾರದ ಮುಖ್ಯ ಕಾರ್ಯದರ್ಶಗಳಿಗೆ ಹಾಗೂ ವಸತಿ ಇಲಾಖೆಯ ಕಾರ್ಯದರ್ಶಿಗಳಿಗೆ, ಸೂಕ್ತ ನಿರ್ದೇಶನ ನೀಡಿದರು ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳ ನಿರ್ಧಾರದಿಂದ ಲಕ್ಷಾಂತರ ಮಂದಿ ವಸತಿ ವಂಚಿತ ಬಡವರು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.