ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ -ಹಚ್ ಡಿಕೆ

ರಾಮನಗರ: ಈ ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಚನ್ನಪಟ್ಟಣ ಶಾಸಕರೂ ಆದ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ತೀವ್ರ ಟಾಂಗ್ ನೀಡಿದರು.

ಚನ್ನಪಟ್ಟದಲ್ಲಿ ಶುಕ್ರವಾರ ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಏನನ್ನೂ ಮಾಡದ ಕಾಂಗ್ರೆಸ್ ನಾಯಕರು, ಮುಖ್ಯವಾಗಿ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಅವರು; ನಾನು ಅವರನ್ನಾಗಲಿ ಅಥವಾ ಮತ್ತೆ ಯಾರನ್ನೇ ಆಗಲಿ ಟಾರ್ಗೆಟ್ ಮಾಡ್ತಿಲ್ಲ, ನನಗೂ ಅವರಿಗೂ ಸಂಬಂಧ ಇಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆದರೆ ನನ್ನನ್ನ ಅವರು ಟಾರ್ಗೆಟ್ ಮಾಡಿದ್ದಾರೆಂದರು.

ಅವರು ಕುಮಾರಸ್ವಾಮಿಯನ್ನು ರಾಮನಗರದಿಂದ ಖಾಲಿ ಮಾಡಿಸಬೇಕಂತೆ. ನನ್ನನ್ನು ಖಾಲಿ ಮಾಡಿಸಲು ಆಗುತ್ತಾ ಅನ್ನುವುದು ಅವರಿಗೆ ಗೊತ್ತಿಲ್ಲ. ನನಗೂ ಈ ಜಿಲ್ಲೆಗೂ ತಾಯಿ ಮಗನ ಸಂಬಂಧ ಇದೆ ಎಂದು ಹೆಚ್ ಡಿಕೆ ತಿರುಗೇಟು ನೀಡಿದರು.

ಸಿ.ಎಸ್.ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತರೋ ಅದನ್ನು ಕಟ್ಟಿಕೊಂಡು ನನಗೇನು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು. ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರೆ ಅಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದು ಅವರು ಹೇಳಿದರು.

ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದು ಮಾಜಿ ಸಿಎಂ ತಿಳಿಸಿದರು.

ಸಿ.ಎಂ.ಇಬ್ರಾಹಿಂ ಅವರು ನಮಗೆ ಹಳಬರು, ದೇವೇಗೌಡರ ಗರಡಿಯಲ್ಲಿ ಬೆಳೆದವರು. ನಾನು ಸಿದ್ದರಾಮಯ್ಯ ಜತೆ ಹೋಗಿ ದೇವೇಗೌಡರನ್ನು ದೂರ ಮಾಡಿಕೊಂಡೆ. ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ನಾನು ಜೆಡಿಎಸ್ ಸೇರ್ತೇನೆಂದು ಸ್ವತಃ ಅವರೇ ಹೇಳಿದ್ದಾರೆಂದರು.

ರಾಜ್ಯ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ. ಆ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಇನ್ನೂ ಒಂದು ವರ್ಷ ಇದೆ. ಅದರ ಬಗ್ಗೆ ನಾನೇಕೆ ಹೇಳಲಿ ಎಂದು ಹೆಚ್ ಡಿಕೆ ಮಾರ್ಮಿಕವಾಗಿ ನುಡಿದರು.

ಮಾಗಡಿ ಶಾಸಕ ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.