ಅಪ್ಪ-ಅಮ್ಮನ ಮೇಲಿನ ಕೊಪಕ್ಕೆ ರೇಷ್ಮೆ ಹುಳುಗಳಿಗೆ ವಿಷ ಇಟ್ಟ ಪುತ್ರಿ

ಕೋಲಾರ: ಆಸ್ತಿ ನೀಡುತ್ತಿಲ್ಲ ಕೋಪಕ್ಕೆ  ಮಗಳು ಗಂಡ ಮತ್ತು ಮಗನೊಂದಿಗೆ ಸೇರಿ, ತಂದೆ-ತಾಯಿಗೆ ಸೇರಿದ ರೇಷ್ಮೆಗೂಡಿನಲ್ಲಿದ್ದ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿ ಹುಳುಗಳನ್ನು ಸಾಯಿಸಿರುವ ಹೇಯ ಘಟನೆ ಕೋಲಾರದಲ್ಲಿ ನಡೆದಿದೆ.

ಇಂತಹ ಅಮಾನವೀಯ ಘಟನೆ, ಕೋಲಾರ ತಾಲೂಕಿನ ಯಳಚೀಪುರದಲ್ಲಿ ನಡೆದಿದೆ.

ಗ್ರಾಮದ ರಾಮಣ್ಣ ಮತ್ತು ಲಕ್ಷ್ಮಮ್ಮ ದಂಪತಿ ಜೀವನೋಪಾಯಕ್ಕಾಗಿ ರೇಷ್ಮೆ ಬೆಳೆಯುತ್ತಾರೆ.

ಮೊಟ್ಟೆ ಉತ್ಪಾದನೆಗಾಗಿ ಹುಳುಗಳಿಗೆ ಹಿಪ್ಪು ನೇರಳೆ ಸೋಪ್ಪು ನೀಡಿ ಆರೈಕೆ ಮಾಡುತ್ತಿದ್ದರು.

ಜಮೀನು ನೀಡುತ್ತಿಲ್ಲವೆಂಬ ಹತಾಶೆಯಿಂದ ಮಗಳು ಚೌಡಮ್ಮ ತನ್ನ ಪತಿ ಲಕ್ಷ್ಮಣ್ ಹಾಗೂ ಮಗ ಆನಂದನೊಂದಿಗೆ ಸೇರಿ ಗುರುವಾರ ರಾತ್ರಿ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿದ್ದಾರೆ.

ಇದರಿಂದ ನೂರಾರು ಹುಳುಗಳು ಸತ್ತಿವೆ. ಸುಮಾರು 1 ಲಕ್ಷ ರೂ.ನಷ್ಟ ಉಂಟಾಗಿದೆ ಎಂದು ವೃದ್ಧ ದಂಪತಿ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ.

ಪೊಲೀಸರು ಈ ಸಂಬಂಧ‌ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.