ಹೆಚ್ಚು ಬಟ್ಟೆ ಧರಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಚಾಮರಾಜನಗರ : ಮಾನಸಿಕ ಅಸ್ವಸ್ಥನೊಬ್ಬ 20ಕ್ಕೂ ಹೆಚ್ಚು ಶರ್ಟ್ ಹಾಗೂ ಮತ್ತಿತ್ತರ ದಿರಿಸು ಧರಿಸಿದ್ದರಿಂದ ಬೈಕ್ ಗುದ್ದಿದ್ದರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಸುಮಾರು 50 ವರ್ಷದ ಮಾನಸಿಕ ಅಸ್ವಸ್ಥ ದಿಢೀರನೇ ಬೈಕ್​ಗೆ ಅಡ್ಡಲಾಗಿ ಬಂದಿದ್ದರಿಂದ ಸವಾರನೋರ್ವ ಗುದ್ದಿದ್ದಾನೆ. ಕೆಳಗೆ ಬಿದ್ದಿದ್ದ ಆತನನ್ನು ಪರಿಶೀಲಿಸಿದಾಗ ತಲೆಗೆ ಸ್ವಲ್ಪ ತರಚು ಗಾಯಗಳಾಗಿದ್ದು, 20ಕ್ಕೂ ಹೆಚ್ಚು ಬಟ್ಟೆಗಳನ್ನು ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ‌.

ಮಾನವೀಯತೆ ಮೆರೆದ ಪೊಲೀಸ್: ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಾಮರಾಜನಗರ ಗ್ರಾಮಾಂತರ ಠಾಣೆಯ ಶಿವಮೂರ್ತಿ ಅವರು, ಮಾನಸಿಕ ಅಸ್ವಸ್ಥನ ಕೊಳಕು ಬಟ್ಟೆಗಳನ್ನು ತೆಗೆದು ಹೊಸ ಬಟ್ಟೆ ತೊಡಿಸಿ, ಶೇವ್ ಮಾಡಿ ಶುಶ್ರೂಷೆ ಮಾಡಿದ್ದಾರೆ. ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ಹಿನ್ನೆಲೆ ಮೂಡಲಧ್ವನಿ ವೃದ್ಧಾಶ್ರಮಕ್ಕೆ ಬಿಟ್ಟು ಬರುವ ಮೂಲಕ ಸಾರ್ಥಕ ಕಾರ್ಯ ನಡೆಸಿದ್ದಾರೆ.