ನವದೆಹಲಿ:1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಭಂಟ ಅಬೂಬಕರ್‍ನನ್ನು ದುಬೈನಲ್ಲಿ ಬಂಧಿಸಲಾಗಿದೆ.
ಸರಿಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಾವೂದ್ ಇಬ್ರಾಹಿಂನ ಆಪ್ತ ಅಬೂಬಕರ್ ಕೂಡ ಭಾರತದ ಮೋಸ್ಟ್ ವಾಂಟೆಡ್ ಪಾತಕಿ.
ದುಬೈನಲ್ಲಿ ಬಂಧಿತನಾಗಿರುವ ಅಬೂಬಕರನನ್ನು ಭಾರತಕ್ಕೆ ಕರೆತರಲು ರಾಜತಾಂತ್ರಿಕ ಪ್ರಕ್ರಿಯೆಗಳು ಆರಂಭವಾಗಿವೆ.
1993ರ ಮುಂಬೈ ಸರಣಿ ಬಾಂಬ್ ಸ್ಪೋಟದಲ್ಲಿ ಈತ ಕೂಡ ಪ್ರಮುಖ ಆರೋಪಿಯಾಗಿದ್ದ. ದುಬೈ ಮತ್ತು ಪಾಕಿಸ್ತಾನದಲ್ಲಿ ನೆಲೆಯೂರಿದ್ದ ಅಬೂಬಕರ್ ವಿರುದ್ಧ ಭಾರತ ಸರ್ಕಾರ 1997ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.
ಅಬ್ದುಲ್ ಗಫಲ್ ಶೇಖ್ ಎಂಬುದು ಈತನ ನಿಜ ಹೆಸರಾಗಿದ್ದು, ಚಿನ್ನ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತು ಕಳವು ಮಾಡಿಕೊಂಡು ಗಲ್ಫ್ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡಿದ್ದ.
ಭಾರತದ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂನ ಅತ್ಯಂತ ನಂಬಿಕಸ್ಥ ಭಂಟನಾಗಿದ್ದ ಈತ ಕೆಲವು ಬಾರಿ ಪಾಕಿಸ್ತಾನ ಸೇರಿದಂತೆ ಮತ್ತಿತರ ರಾಷ್ಟ್ರಗಳಲ್ಲೂ ತಲೆಮರೆಸಿಕೊಂಡಿದ್ದ.
2019ರಲ್ಲಿ ಈತನನ್ನು ದುಬೈನಲ್ಲಿ ಬಂಧಿಸಲಾಗಿತ್ತು. ಆ ವೇಳೆ ಭಾರತ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿತ್ತು. ಆದರೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ ಬಂಧನದಿಂದ ಅಬೂಬಕರ್ ಪಾರಾಗಿದ್ದ.
1993 ಮಾರ್ಚ್ 12ರಂದು ಮುಂಬೈನ ಅನೇಕ ಕಡೆ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 257 ಮಂದಿ ಸಾವನ್ನಪ್ಪಿ 1400 ಜನ ಗಾಯಗೊಂಡಿದ್ದರು.
ದಾವೂದ್ ಇಬ್ರಾಹಿಂ, ಟೈಗರ್ ಮೆನನ್, ಯಾಕೂಬ್ ಮೆನನ್, ಅಬೂಬಕರ್, ಮುಸ್ತಾಫ ಮತ್ತಿತರರು ಸೇರಿ ಈ ದುಷ್ಕೃತ್ಯ ನಡೆಸಿದ್ದು, ತನಿಖೆ ನಂತರ ಸಾಬೀತಾಗಿತ್ತು.
ಇದೇ ಪ್ರಕರಣದಲ್ಲಿ 2013 ಮಾರ್ಚ್ 21ರಂದು ಸುಪ್ರೀಂಕೋರ್ಟ್ ಈ ಪ್ರಕರಣದ ಆರೋಪಿಯಾಗಿದ್ದ ಯಾಕೂಬ್ ಮೆನನ್‍ಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಬಾಂಬ್ ಸ್ಪೋಟಿಸಲು ಹಣಕಾಸಿನ ನೆರವು, ವಾಹನಗಳ ಖರೀದಿ ಮತ್ತು ಬಾಂಬ್‍ಗಳನ್ನು ಶೇಖರಿಸಿಕೊಂಡಿದ ಆರೋಪಗಳು ಈತನ ಮೇಲಿದ್ದವು.
2015 ಜುಲೈ 30ರಂದು ಮಹಾರಾಷ್ಟ್ರದ ನಾಗಪುರದ ಸೆಂಟ್ರಲ್ ಜೈಲಿನಲ್ಲಿ ಯಾಕೂಬ್ ಮೆನನ್‍ಗೆ ನೇಣಿಗೇರಿಸಲಾಗಿತ್ತು.
ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆನನ್ ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿದ್ದು, ಐಎಸ್‍ಐ ಭದ್ರತೆಯಲ್ಲಿದ್ದಾರೆ. ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನವನ್ನು ಮುಂದುವರೆಸಿದೆ.