ಚಾಮರಾಜನಗರ : ಯಾರ್ಯಾರು ಶಾಲೆಗೆ ಬರಬೇಕೋ ಅವರು ವಸ್ತ್ರ ಸಂಹಿತೆ ಫಾಲೋ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ.
ನಗರದ ದೀನಬಂಧು ಶಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ವಸ್ತ್ರಸಂಹಿತೆ ಇದು ಬಿಜೆಪಿ ಬಂದ ಬಳಿಕ ತಂದ ಆ್ಯಕ್ಟ್ ಅಲ್ಲ, ರೂಲ್ಸ್ ಕೂಡ ಅಲ್ಲ, ರೂಲ್ 11ರಂತೆ ಶಾಲೆಗಳು ಅಳವಡಿಸುವ ವಸ್ತ್ರಸಂಹಿತೆಯನ್ನು ಫಾಲೋ ಮಾಡುವುದು ವಿದ್ಯಾರ್ಥಿಗಳ ಕರ್ತವ್ಯ ಎಂದರು.
ಶಿಕ್ಷಣ ಆಸಕ್ತರೆಲ್ಲಾ ಇದನ್ನು ಫಾಲೋ ಮಾಡುತ್ತಾರೆ. ಯಾರಿಗೆ ಆಸಕ್ತಿಯಿಲ್ಲ ಅವರಿಗೆ ಕೇಳಿಕೊಳ್ಳುತ್ತೇನೆ, ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯಯಾಗಲಿ, ಧರ್ಮವಾಗಲಿ ಬೇಡ. ಮಕ್ಕಳ ಮನಸ್ಸಲ್ಲಿ ಸಮಾನತೆ, ಬ್ರಾತೃತ್ವ ಸಂಪಾದನೆ ಮಾಡಲು ಸಮವಸ್ತ್ರ ಬಹಳಷ್ಟು ಪರಿಣಾಮ ಬೀರಲಿದೆ.ಪ್ರಚೋದನೆ ಮಾಡಿ ಶಿಕ್ಷಣವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿರುವವರಿಗೆ ಸರಿಯಾದ ಉತ್ತರವನ್ನು ಮಕ್ಕಳು-ಪಾಲಕರು ಕೊಡಬೇಕೆಂದು ಹಿಜಾಬ್ ಬೇಕೆನ್ನುವ ಮುಖಂಡರಿಗೆ ಟಾಂಗ್ ಕೊಟ್ಟರು.
ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ದಿಢೀರ್ ವರ್ಗಾವಣೆಗೆ ಪ್ರತಿಕ್ರಿಯಿಸಿ, ಖಂಡಿತಾ ಇದು ತಲೆದಂಡವಲ್ಲ, ನಿನ್ನೆ ಪೂರ್ಣವಾಗಿ ರಿವ್ಯೂ ಮೀಟಿಂಗ್ ಮಾಡಲಾಗಿದೆ, ಸ್ವಾಭಾವಿಕವಾಗಿ ಸ್ಥಾನ ಕೊಡಲು ಅವರನ್ನ ವರ್ಗಾವಣೆ ಮಾಡಲಾಗಿದೆ. ಹಿಜಾಬ್ ವಿವಾದದ ತಲೆದಂಡವಲ್ಲ ಎಂದು ಸ್ಪಷ್ಟ ಪಡಿಸಿದರು.
ನನಗೆ ಗೊತ್ತಿರುವಂತೆ ಸಂಪುಟ ಪುನಾರಚನೆ ಕಸರತ್ತೇನು ನಡೆಯುತ್ತಿಲ್ಲ. ಸಿಎಂ ಅವರಿಗೆ ಎಲ್ಲವೂ ಗೊತ್ತಿದ್ದು ಯಾರಿಗೆ ಏನು ಜವಾಬ್ದಾರಿ, ಯಾವಾಗ ಕೊಡಬೇಕೆಂದು ಬೊಮ್ಮಾಯಿ ಅವರಿಗೆ ಗೊತ್ತಿದೆ. ನಾವೆಲ್ಲಾ ಒಟ್ಟಿಗೆ ಇದ್ದು, ಯಾವುದೇ ಭಿನ್ನಮತವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನಸೌಧದಲ್ಲಿ ನಾವು ಯಾವೂದನ್ನು ಬ್ಯಾನ್ ಮಾಡಿಲ್ಲ, ಹಿಜಾಬ್ ಬದಲು ಬುರ್ಖಾ ಹಾಕಿಕೊಂಡು ಬಂದರೂ ನಮಗೇನು ಅಭ್ಯಂತರವಿಲ್ಲ ಎಂದು ಶಾಸಕಿ ಖನಿಜಾ ಫಾತಿಮಾ ಹೇಳಿಕೆಗೆ ತಿರುಗೇಟು ಕೊಟ್ಟರು.