(ವರದಿ :ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ : ಜೀವನದಲ್ಲಿ ಸಮಸ್ಯೆಗಳು ಬರೋದು ಸಹಜ, ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ, ಕಠಿಣ ಪರಿಶ್ರಮ ಪಟ್ಟರೆ ಖಂಡಿತಾ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.
ಒಂದೇ ಕುಟುಂಬದ ಮೂವರು ಖಾಕಿಧಾರಿಗಳಾಗಿ ಹೊರಹೊಮ್ಮಿರುವುದು ಕಠಿಣ ಪರಿಶ್ರಮದಿಂದ ಎಂಬುದು ವಿಶೇಷ.
ಒಂದು ಕುಟುಂಬದಲ್ಲಿ ಒಬ್ಬರು ಸರ್ಕಾರಿ ನೌಕರರಿರುವುದೇ ವಿರಳ. ಜೊತೆಗೆ ನೌಕರಿ ಸಿಗೋದು ತುಂಬಾ ಕಷ್ಟ.
ಆದರೆ ಇಲ್ಲೊಂದು ಕುಟುಂಬದಲ್ಲಿ ಕಠಿಣ ಪರಿಶ್ರಮದ ಫಲವಾಗಿ ಒಂದೆ ಕುಟುಂಬದ ಮೂವರು ಮಕ್ಕಳು ಪೊಲೀಸ್ ಸಬ್ ಇನ್ಸ್‌ಪೆಕ್ಟರುಗಳಾಗಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಬ್ಬೊಬ್ಬರಾಗಿ ಉತ್ತೀರ್ಣಗೊಂಡು ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಮೂಲಕ ಯುವಜನತೆಗೆ ಇವರು ಮಾದರಿಯಾಗಿದ್ದಾರೆ.
ಚಾಮರಾಜನಗರ ತಾಲೂಕು ಮಾದಲವಾಡಿ ಗ್ರಾಮದ ಚಂದ್ರು ಹಾಗೂ ಶಾಂತಮ್ಮ ಎಂಬ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬ ಹೆಣ್ಣುಮಗಳಿದ್ದಾರೆ.
ಈ ಪೈಕಿ ಹಿರಿಯ ಮಗ ರವಿಕುಮಾರ್ ಪ್ರಸ್ತುತ ಹಾವೇರಿ ಜಿಲ್ಲೆಯ ಶಿಗ್ಗಾವ್ ನಲ್ಲಿ ರಿಸರ್ವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎರಡನೇ ಮಗಳು ಸುಗುಣ 2021-22ರಲ್ಲಿ ನಡೆದ ಪಿಎಸ್ಐ ಪರೀಕ್ಷೆಯಲ್ಲಿ 94 ನೇ ಸ್ಥಾನ ಪಡೆದು ಆಯ್ಜೆಯಾಗಿದ್ದಾರೆ. ಇನ್ನು ಮೂರನೇ ಮಗ ಪ್ರಭು ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿ ಪ್ರಸ್ತುತ ಕಲ್ಬುರ್ಗಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪದವಿ ಜೊತೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ-
ಹಿರಿಯ ಮಗ ರವಿಕುಮಾರ್ ಸ್ವಗ್ರಾಮ ಮಾದಲವಾಡಿ ಹಾಗೂ ಪಕ್ಕದ ಬೊಮ್ಮನಹಳ್ಳಿಯಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ವಿದ್ಯಾಭ್ಯಾಸ ಪೂರೈಸಿ ತೆರಕಣಾಂಬಿಯಲ್ಲಿ ಪಿಯುಸಿ, ಗುಂಡ್ಲುಪೇಟೆ ಜೆಎಸ್ಎಸ್ ಕಾಲೇಜಿನಲ್ಲಿ ಬಿಎ ಮುಗಿಸಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎ (ಅರ್ಥಶಾಸ್ತ್ರ) ಮಾಡಿದ್ದಾರೆ.
ಎಂಎ ವ್ಯಾಸಂಗ ಮಾಡುತ್ತಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಅವರು ಬರೆದಿದ್ದರು. 2014-15 ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾಗಿ ಮೈಸೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ 2018-19 ನೇ ಸಾಲಿನಲ್ಲಿ ರಿಸರ್ವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿ ಈಗ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಣ್ಣನ ಹಾದಿ ಹಿಡಿದ ತಮ್ಮ-
ಅಣ್ಣನ ಹಾದಿ ಹಿಡಿದ ತಮ್ಮ ಪ್ರಭು ಕೂಡಾ ತಮ್ಮ ಸ್ವಗ್ರಾಮ ಮಾದಲವಾಡಿಯಲ್ಲಿ ಪ್ರಾಥಮಿಕ ಗುಂಡ್ಲುಪೇಟೆಯ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ , ಗುಂಡ್ಲುಪೇಟೆಯ ದೊಡ್ಡುಂಡಿ ಭೋಗಪ್ಪ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿ ಬಳಿಕ ಮೈಸೂರಿನ ಮಹಾಜನ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು.
ಪದವಿ ವಿದ್ಯಾಭ್ಯಾಸ ಮುಗಿಸುತ್ತಲೇ ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿ ಈಗ ಕಲಬುರ್ಗಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಅಣ್ಣಂದಿರ ಸಾಧನೆಯೇ ತಂಗಿಗೆ ಸ್ಪೂರ್ತಿ-
ಈ ಅಣ್ಣಂದಿರ ತಂಗಿ ಸುಗುಣ ಸಹ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ ಪ್ರೌಢ ಶಿಕ್ಷಣವನ್ನು ಬೊಮ್ಮನಹಳ್ಳಿಯಲ್ಲಿ, ಪಿಯುಸಿಯನ್ನು ತೆರಕಣಾಂಬಿಯ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ.
ತನ್ನ ಇಬ್ಬರು ಸಹೋದರರ ಸಾಧನೆಯಿಂದ ಸ್ಫೂರ್ತಿಗೊಂಡ ಇವರು ಮೈಸೂರಿನಲ್ಲಿದ್ದುಕೊಂಡು ಸತತ ಎರಡು ವರ್ಷ ಕಾಲ ಅಭ್ಯಾಸ ಮಾಡಿ 2020-21 ನೇ ಸಾಲಿನ ಪಿಎಸ್ಐ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪದವಿ ಶಿಕ್ಷಣ ಮುಗಿಸಿದ ಸುಗುಣ ಎರಡು ಬಾರಿ ಎಫ್‌ಡಿಎ, ಎಸ್‌ಡಿಎ ಹಾಗೂ ಪಿಎಸ್ಐ ಪರೀಕ್ಷೆ ಬರೆದಿದ್ದರು, ಮೂರನೇ ಬಾರಿಗೆ ಪಿಎಸ್ಐ ಪರೀಕ್ಷೆ ಬರೆದು ಯಶ ಕಂಡಿದ್ದಾರೆ.
ಮಕ್ಕಳ ಶ್ರಮಕ್ಕೆ ಫಲ ಎಂದ ಪೋಷಕರು-
ಗಾರೆ ಕೆಲಸ ಹಾಗೂ ವ್ಯವಸಾಯ ಮಾಡಿಕೊಂಡಿರುವ ಚಂದ್ರು ಹಾಗೂ ಶಾಂತಮ್ಮ ಅವರು ತಮ್ಮ ಮೂವರು ಮಕ್ಕಳು ಪೊಲೀಸ್ ಸಬ್ ಇನ್ಸ್ ಪಕ್ಟರ್ ಗಳಾಗಿ ಆಯ್ಕೆಯಾಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಮಕ್ಕಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ
ಓದಿನ ಜೊತೆಗೆ ಬೇಕು ಅಭ್ಯಾಸ-
ಸದಾಕಾಲ ಓದುವುದರ ಜೊತೆಗೆ ಸತತವಾಗಿ ಪ್ರಯತ್ನ ಪಡುತ್ತಿರಬೇಕು. ಪದವಿ ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಭ್ಯಾಸ ಮಾಡಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ, ಛಲ ಬಿಡದೇ ಪರೀಕ್ಷೆಗಳನ್ನು ಎದುರಿಸಬೇಕು.ಸಾವಿರಾರು ಸಮಸ್ಯೆಗಳು ಬರಬಹುದು ಅದಕ್ಕೆ ತಲೆಕೆಡಿಸಿಕೊಳ್ಳದೇ, ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮ ಪಟ್ಟು ಓದಿದರೆ ಖಂಡಿತಾ ಯಶಸ್ಸು ಸಿಗುತ್ತದೆ ಎನ್ನುತ್ತಾರೆ ಈ ಮೂವರು ಪಿಎಸ್ಐಗಳು.
ಕೆಎಎಸ್ ಅಧಿಕಾರಿ ಆಗುವ ಗುರಿ-
ಬಾಲ್ಯದಲ್ಲಿ ಅನುಭವಿಸಿದ ನೋವು ನನ್ನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಲೇಬೇಕೆಂಬ ಛಲ ಹುಟ್ಟುಹಾಕಿತು ಎನ್ನುವ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ನನಗೆ ಕೆಎಎಸ್ ಅಧಿಕಾರಿ ಆಗುವ ಗುರಿಯಿದೆ. ಒಂದು ಬಾರಿ ಪ್ರಯತ್ನ ಸಹ ಮಾಡಿ ಸಂದರ್ಶನ ಕ್ಕೂ ಹೋಗಿದ್ದೆ. ಈಗ ಮತ್ತೇ ಕೆಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ಅಣ್ಣನ ಮಾರ್ಗದರ್ಶನ, ಸ್ನೇಹಿತರ ಜೊತೆಗಿನ ಓದು ಹಾಗೂ ಪದವಿ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಪರಿಣಾಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ಪಿ ಎಸ್ ಐ ಪ್ರಭು ತಿಳಿಸಿದ್ದಾರೆ.
ತಾಳ್ಮೆ ಮತ್ತು ಸತತ ಪ್ರಯತ್ನವಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ಆದ್ದರಿಂದ ಸದಾಕಾಲ ಪ್ರಯತ್ನ ಮಾಡುತ್ತಿರಬೇಕು ಎಂದು ಇದೀಗ ಪಿಎಸ್ಐ ಆಗಿ ಆಯ್ಕೆಯಾಗಿರುವ ಸುಗುಣ ಪ್ರತಿಕ್ರಿಯಿಸಿದ್ದಾರೆ.
ಈ ಮೂವರು ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸೋಣ