ಮಂಗಳೂರು: ದೇಶ ಮತ್ತು ರಾಜ್ಯಕ್ಕೆ ಸಂಕಷ್ಟ ಒದಗಿ ಬಂದಿದೆ, ಅದನ್ನು ಸಮರ್ಥವಾಗಿ ನಿಭಾಯಿಸಿ ಸ್ವಾತಂತ್ರ್ಯ ಆಶಯಗಳನ್ನು ಕಾಪಾಡಿಕೊಳ್ಳಲು ಹೊಸ ಸದಸ್ಯತ್ವದ ಮೂಲಕ ಕಾಂಗ್ರೆಸ್ ಮುಂದಡಿ ಇಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು 75 ವರ್ಷಗಳಾಗಿವೆ. ಪ್ರಸ್ತುತ ದೇಶ ಸಂಕಷ್ಟಕ್ಕೆ ಸಿಲುಕಿದೆ. ದೇಶವನ್ನು ಮರು ನಿರ್ಮಾಣ ಮಾಡುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆರಂಭಿಸಿದ್ದಾರೆ. ಮುಂದೆ ಪಕ್ಷದಲ್ಲಿ ನಡೆಯುವ ಸಾಂಸ್ಥಿಕ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪಡೆಯಬೇಕಾದರೆ ಒಂದು ತಿಂಗಳಲ್ಲಿ ಸದಸ್ಯತ್ವ ಪಡೆಯಬೇಕೊದೆ ಎಂದು ತಿಳಿಸಿದರು.
ಅನಂತರವೂ ಸದಸ್ಯತ್ವ ಪಡೆಯಬಹುದು. ಆದರೆ ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕಾದರೆ ತಿಂಗಳ ಅವಧಿಯಲ್ಲಿ ಡಿಜಿಟಲ್ ಸದಸ್ಯತ್ವ ಪಡೆಯಬೇಕು ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಕುರಿತು ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದ ಡಿಕೆಶಿ, ಸಚಿವ ವಿ.ಸುನೀಲ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದಲ್ಲಿ ಶಾಂತಿ ಕದಡುವುದು ಛಾಳಿಯಾಗಿದೆ. ಅವರು ಪದೇ ಪದೇ ವಿವಾದಿತ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಟೀಕಿಸಿದರು.