ಚಾಮರಾಜನಗರಕ್ಕೂ ಕಾಲಿಟ್ಟ ಹಿಜಬ್ ಕೂಗು

ಚಾಮರಾಜನಗರ: ಹಿಜಾಬ್  ಕೂಗು ಈಗ ಚಾಮರಾಜನಗರಕ್ಕೂ ಕಾಲಿಟ್ಟಿದೆ.

ನೂರಾರು ಮುಸ್ಲಿಂ ಮಹಿಳೆಯರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿ ಶಿರವಸ್ತ್ರ ನಮ್ಮ ಮೂಲಭೂತ ಹಕ್ಕೆಂದು ಪ್ರತಿಪಾದಿಸಿದರು.

ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಣೆ ಮಾಡಿರುವುದು ಸರಿಯಲ್ಲ ಎಂದು ಘೋಷಣೆ ಕೂಗಿದರು.

ಮುಸ್ಲಿಂ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ನಗರದ ಲಾರಿ ನಿಲ್ದಾಣದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಹಿಜಾಬ್ ತಮ್ಮ ಮೂಲ ಹಕ್ಕು, ಬೇರೆಯವರು ಬಿಂದಿ, ಬಳೆಯಂತೆ ತಮ್ಮ ಮಕ್ಕಳು ಹಿಜಾಬ್ ಧರಿಸುತ್ತಾರೆ, ಹಿಜಾಬ್ ಸಮವಸ್ತ್ರದ ಒಂದು ಭಾಗವಾಗಿಯೇ ಇದೆ ಎಂದು ಹೇಳಿದರು.

ಇದು ನಮ್ಮ ಹಕ್ಕೆಂದು ಪಾಲಕರು ಆಗ್ರಹಿಸಿದರು.ಇಸ್ಲಾಂ ಧರ್ಮದ ಧಾರ್ಮಿಕ ಮೂಲ ತತ್ತ್ವಗಳ ಅನುಗುಣವಾಗಿ ಹೆಣ್ಣು ಶಿರವಸ್ತ್ರ ಧರಿಸುವುದು ಕಡ್ಡಾಯಗೊಳಿಸಿದೆ ಎಂದು ಹೇಳಿದರು.

ಒಂದು ವೇಳೆ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ನಮಗೆ ಸಂವಿಧಾನ ನೀಡಿದ ಹಕ್ಕುಗಳನ್ನು ಮನುವಾದಿಗಳು ಕಸಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಪ್ರತಿಯೊಂದು ಧರ್ಮದ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರಾಕರಣೆ ಶಿಕ್ಷಣದ ನಿರಾಕರಣೆಯಾಗಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ವಿದ್ಯಾರ್ಥಿನಿಯರಿಗಿಂತ ನೂರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಹಿಜಾಬ್ ಬೇಕೆಂದು ಒತ್ತಾಯಿಸಿದರು.