ಕನೀಜ್ ಪಾತಿಮಾಗೆ ಈಶ್ವರಪ್ಪ ತಿರುಗೇಟು

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)    

ಚಾಮರಾಜನಗರ: ಹಿಜಾಬ್ ಧರಿಸಿ ವಿಧಾನಸಭೆಗೆ ಬರುತ್ತೇನೆ, ಧಮ್ ಇದ್ದರೆ ತಡೆಯಲಿ ಎಂಬ ಕಲಬುರಗಿ ಶಾಸಕಿ ಕನೀಜ್ ಫಾತೀಮಾ ಅವರ ಹೇಳಿಕೆಗೆ  ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ,  ಪ್ರಪಂಚದಲ್ಲಿ  ಎಲ್ಲಿಗೆ ಬೇಕಾದ್ರು ಹಿಜಾಬ್ ಧರಿಸಿ ಹೋಗಬಹುದು ಆದರೆ ಶಾಲೆಗಳಲ್ಲಿ ಬೇಡ ಎಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.

ಶಾಸಕಿ ಧಮ್ ಇದ್ದರೆ ತಡೆಯಿರಿ ಎಂದು ಹೇಳುತ್ತಾರೆ, ಇಲ್ಲಿ ಧಮ್ ಪ್ರಶ್ನೆ ಬರುವುದಿಲ್ಲ. ಯಾರು ಯಾವ ವಸ್ತ್ರವನ್ನಾದರು ಧರಿಸಿ ಬರಬಹುದು ಎಂದರು.

ಧಮ್ಮಿನ ಬಗ್ಗೆ ಮಾತನಾಡುವ ಇವರಿಗೆ ಧಮ್ ಇದ್ದರೆ ಶಾಲೆಗಳಿಗೆ ಹಿಜಾಬ್ ಧರಿಸಿಕೊಂಡು ಬರಲು ಕೇಳುತ್ತಿರುವ  ಹೆಣ್ಣು ಮಕ್ಕಳನ್ನು  ಮಸೀದಿಗಳಿಗೆ ಕರೆದುಕೊಂಡು ಹೋಗಲಿ ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.

ಯಾವ ಉಡುಪಿಯಲ್ಲಿ ಗೋವಿನ ರಕ್ಷಣೆ ಆಗಲಿಲ್ಲವೋ ಅದೇ ಉಡುಪಿಯಿಂದ ಈಗ  ಹಿಜಾಬ್ ಗಲಾಟೆ ಶುರುವಾಗಿದೆ. ಈ ಗಲಾಟೆ ನಮ್ಮ ರಾಜ್ಯದಿಂದ ಇಡೀ ದೇಶಕ್ಕೆ ಹಬ್ಬಿದೆ ಎಂದು ಬೇಸರ ಪಟ್ಟರು.

ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಬೇಡಿ. ಅವರನ್ನು ಶಿಕ್ಷಣ ಕಲಿಯಲು ಬಿಡಿ, ಶಿಕ್ಷಣದಲ್ಲಿ ಧರ್ಮ ತರುವ ಪ್ರಯತ್ನ ಮಾಡಬೇಡಿ  ಎಂದು  ನಾನು ಕಾಂಗ್ರೆಸ್ ನವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. 

ಉಡುಪಿ ಕಾಲೇಜಿನಲ್ಲಿ 96 ವಿದ್ಯಾರ್ಥಿಗಳಿದ್ದರು. 90 ಜನ ಸಮವಸ್ತ್ರ ಒಪ್ಪಿಕೊಂಡು ಬರುತ್ತಿದ್ದರು.ಉಳಿದ ಆರೇ ಜನರಿಂದ ಈ ಸಮಸ್ಯೆ ಉದ್ಭವವಾಗಿದೆ. ಈ ಆರು ಜನಕ್ಕೆ ಕುಮ್ಮಕ್ಕು ಕೊಟ್ಟಿದ್ದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಶಾಲೆಗಳಿಗೆ ಸಮವಸ್ತ್ರ ಧರಿಸಿ ಹೋಗಬೇಕು ಎಂದು ಕೇರಳದಲ್ಲಿ 2018 ರಲ್ಲಿ   ಕೋರ್ಟ್ ತೀರ್ಪು ನೀಡಿದೆ. ಇದು ಕಾಂಗ್ರೆಸ್ ನವರಿಗೆ ಗೊತ್ತಿಲ್ವಾ? ಎಂದು ಈಶ್ವರಪ್ಪ ತೀಕ್ಷ್ಣವಾಗಿ ಪ್ರಶ್ನಿಸಿದರು.

ಹಿಜಾಬ್ ಗಲಾಟೆಗೆ ಕಾಂಗ್ರೆಸ್ಸೇ ಕಾರಣ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಕಾಂಗ್ರೆಸ್ ಗೊಂದಲ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದೆ, ಆ ಮೂಲಕ ಮುಸಲ್ಮಾನರ ಓಟ್ ಪಡೆಯುವ ಯತ್ನ ಮಾಡುತ್ತಿದೆ ಎ‌ಂದು ಆಪಾದಿಸಿದರು.

ವಿದ್ಯಾರ್ಥಿಗಳನ್ನು ಶಿಕ್ಷಣ ಪಡೆಯಲು ಬಿಡಿ, ಸಮವಸ್ತ್ರ ಧರಿಸಿಕೊಂಡು‌ ಹೋಗಲು ಅವಕಾಶ ಕೊಡಿ.. ಕೋರ್ಟ್ ತೀರ್ಪಿಗೆ ಬದ್ದರಾಗಿರೋಣ ಎಂದು ಈಶ್ವರಪ್ಪ ಮನವಿ ಮಾಡಿದರು.

ಗಲಾಟೆ ಸೃಷ್ಟಿ ಮಾಡಿದ್ದೇ  ಕಾಂಗ್ರೆಸ್ ಎಂದ ಅವರು, ಶಿವಮೊಗ್ಗದಲ್ಲಿ ಹೊರಗಿನವರು ಬಂದು ಕಲ್ಲು ಹೊಡೆದು ಗಲಾಟೆ ಶುರು ಮಾಡಿದ್ದಾರೆ. ಮಕ್ಕಳಲ್ಲೂ ಮತಾಂಧತೆ ತುಂಬುವ ಕುತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿ ಕಾರಿದರು.

ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ತಂದ ಕಾಂಗ್ರೆಸ್ ಲಿಂಗಾಯತ ಸಮಾಜವನ್ನು ಛಿದ್ರ ಮಾಡಿತ್ತು. ಅದೇ ರೀತಿ ಹಿಜಾಬ್ ವಿಚಾರ ತಂದಿರುವ ಕಾಂಗ್ರೆಸ್ ಒಡೆದು ನಿರ್ನಾಮವಾಗುತ್ತೆ ಎಂದು ಈಶ್ವರಪ್ಪ ಹೇಳಿದರು.

ಹಿಂದೆ ಉಡುಪಿಯಲ್ಲಿ ಗೋ ಹತ್ಯೆ ಮಾಡಿದವರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡಿತ್ತು. ಗೋ ರಕ್ಷಣೆ ಮಾಡಿದವರನ್ನು ಜೈಲಿಗೆ ಕಳುಹಿಸಿತ್ತು ಅದರ ಫಲವಾಗಿ ಕಾಂಗ್ರೆಸ್ ಸರ್ಕಾರ ಹೋಯ್ತು, ಸಿದ್ದರಾಮಯ್ಯ ಸೋತರು ಎಂದು ಸಚಿವ ಈಶ್ವರಪ್ಪ ಹೇಳಿದರು.