ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಶಾಶ್ವತವಾಗಿ ನೌಕರಿ ಕಟ್ -ಸಾರಿಗೆ ನೌಕರರಿಗೆ ಶ್ರೀರಾಮುಲು ಎಚ್ಚರಿಕೆ

ಬೆಂಗಳೂರು: ಇನ್ನು ಮುಂದೆ ಸಾರಿಗೆ ನೌಕರರು ಮುಷ್ಕರ ಅಥವಾ ಪ್ರತಿ ಭಟನೆಯಲ್ಲಿ ಪಾಲ್ಗೊಂಡರೆ ಅಂಥವರು ಶಾಶ್ವತವಾಗಿ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,

ಯಾವುದೇ ಒಬ್ಬ ನೌಕರನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾದರೆ ಅಂಥವರನ್ನು ಪುನಃ ಇಲಾಖೆಗೆ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.

ಆದರೂ ಮಾನವೀಯ  ದೃಷ್ಟಿಯಿಂದ  ಈಗ ವಜಾಗೊಂಡವರನ್ನು ಮರುನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆ ನಡೆಸಿ ನೌಕರರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಜಾಗೊಂಡವರನ್ನು ಹಂತ ಹಂತವಾಗಿ ಮರುನೇಮಕ ಮಾಡಲಾಗುತ್ತದೆ. ಈಗ ನೇಮಕಗೊಂಡವರು ಇನ್ನುಮುಂದೆ ಮುಷ್ಕರಕ್ಕೆ ಹೋಗಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ರಾಮುಲು ತಿಳಿಸಿದರು.

ಪ್ರತಿಭಟನೆ ನಡೆಸಿದ್ದ 1500 ನೌಕರರನ್ನು ಅಮಾನತುಗೊಳಿಸಲಾಗಿತ್ತು. ಒಂದು ಬಾರಿ ವಜಾಗೊಂಡರೆ ಪುನಃ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ.

ಆದರೆ ನೌಕರರ ಕುಟುಂಬಗಳ ಸ್ಥಿತಿಗತಿ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಮರುನೇಮಕ ಮಾಡಲಾಗಿದೆ. ಮುಂದೆ ಇಂತಹ ಪ್ರತಿಭಟನೆಗೆ ಹೋಗಬೇಡಿ ಎಂದು ನೌಕರರಿಗೆ ಕಿವಿಮಾತು ಹೇಳಿದ್ದೇವೆ ಎಂದು ಹೇಳಿದರು.

ಈಗ ಮೊದಲ ಹಂತದಲ್ಲಿ 100 ಮಂದಿ ನೌಕರರಿಗೆ ನೇಮಕಾತಿ ಪತ್ರದ ಆದೇಶವನ್ನು ನೀಡಿದ್ದೇವೆ.ಶುಕ್ರವಾರ 200 ಮಂದಿ ಸೇರಿದಂತೆ ಒಟ್ಟು ಈ ತಿಂಗಳೊಳಗೆ 700 ನೌಕರರನ್ನು ನೇಮಕಾತಿ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೌಕರರ ಪರವಾಗಿ ಇದ್ದಾರೆ.

ಕೆಲವು ಸಂಘಟನೆಗಳು ಮತ್ತು ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಾರಿಗೆ ನೌಕರರಿಗೆ ಪ್ರಚೋದನೆ ನೀಡುತ್ತಾರೆ. ರಕ್ಷಣೆ ಮಾಡುವುದು ಯಾರು ಎಂದು ಪ್ರಶ್ನಿಸಿದರು.