ಮೈಸೂರು: ನರೇಂದ್ರ ಮೋದಿಯವರ ಜತೆ ಮಾತನಾಡಲು ರಾಜ್ಯದ ಯಾವೊಬ್ಬ ಸಂಸದರಿಗೂ ಧೈರ್ಯವಿಲ್ಲ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಶೇ.75-80 ರಷ್ಟು ಕೇಂದ್ರ ಕೊಡುತ್ತದೆ,ಶೇ. 20-25 ರಷ್ಟು ರಾಜ್ಯ ಕೊಡಬೇಕು.
ಆದರೆ ಈಗೇನಾಗಿದೆ ಕೇಂದ್ರ ಶೇ.50ಕೊಡತ್ತೆ. ರಾಜ್ಯ 50 ಕೊಡಬೇಕು. ಕೇಂದ್ರ ಸರ್ಕಾರದಿಂದ ನಮ್ಮ ಪಾಲು ಕಡಿಮೆ ಆಗಿದೆ ಎಂದು ಅಸಮಾಧಾನ ಪಟ್ಟರು.
ಸುಮಾರು 20 ಸಾವಿರ ಕೋಟಿ ಕಾಂಪೆನ್ ಸೇಷನ್ ರಾಜ್ಯಕ್ಕೆ ಕೊಡುತ್ತಿತ್ತು. ಅದು 2022ಜೂನ್ ಗೆ ಅಂತ್ಯವಾಗತ್ತೆ.ಆದ್ದರಿಂದ ಇನ್ನೈದು ವರ್ಷ ಕಾಂಪೆನ್ ಸೇಷನ್ ಕೊಡಲು ಒತ್ತಾಯ ಮಾಡಿ. ಎಲ್ಲಾ ರಾಜ್ಯಗಳ ಜೊತೆ ಸೇರಿಕೊಂಡು ಜಿಎಸ್ ಟಿ ಕೌನ್ಸಿಲ್ ನಲ್ಲಿ ಆಗ್ರಹಿಸಿ ಅಂದರೆ ಈತನಕ ಸಂಸದರು ಮಾಡಿಲ್ಲ ಎಂದು ಕಿಡಿಕಾರಿದರು.
ನಿರ್ಮಲಾ ಸೀತಾರಾಮನ್ ರಾಜ್ಯ ಸಭಾ ಸದಸ್ಯೆ. ರಾಜ್ಯದ 25 ಮಂದಿ ಸಂಸದರಿದ್ದಾರೆ. ಇವರು ಅಲ್ಲಿ ಹೋಗಿ ಕುಳಿತುಕೊಳ್ಳಬೇಕೋ ಬೇಡ್ವೋ, ಇವರಿಗೆ ನರೇಂದ್ರ ಮೋದಿಯವರ ಜೊತೆ ಮಾತನಾಡಲು ಧೈರ್ಯನೇ ಇಲ್ಲ ಎಂದು ಸಿದ್ದು ಟೀಕಿಸಿದರು.
ನರೇಂದ್ರ ಮೋದಿಯವರು ಇವೆಲ್ಲ ಮಾಡದೇನೇ ಪಾರ್ಲಿಮೆಂಟ್ ನಲ್ಲಿ ವಂಶಪಾರಂಪರಿಕ ಆಡಳಿತ ದೇಶಕ್ಕೆ ಅಪಾಯಕಾರಿ ಅಂತ ಭಾಷಣ ಹೊಡಿತಾರೆ. ನರೇಂದ್ರ ಮೋದಿಯವರು ದೇಶವನ್ನು ಹಾಳು ಮಾಡುತ್ತಿದ್ದಾರೆ,ದೇಶ ದಿವಾಳಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮೇಲೆ ಸಾಲ ಎಷ್ಟಿದೆ ಅಂತಾ ಗೊತ್ತಾ ನಿಮಗೆ ಎಂದು ಪತ್ರಕರ್ತರನ್ನೇ ಸಿದ್ದರಾಮಯ್ಯ ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಇರುವಾಗ ದೇಶದ ಮೇಲಿದ್ದ ಸಾಲ 53ಲಕ್ಷ 11ಸಾವಿರ ಕೋಟಿ. ಈ ವರ್ಷದ ಅಂತ್ಯಕ್ಕೆ ದೇಶದ ಮೇಲಿರುವ ಸಾಲ 135 ಲಕ್ಷದ 87ಸಾವಿರ ಕೋಟಿ.
ಈ ಬಜೆಟ್ ನಲ್ಲಿ 11ಲಕ್ಷದ 59ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದು ಹೇಳಿದ್ದಾರೆ. ಬಡ್ಡಿ ಒಂದು ವರ್ಷಕ್ಕೆ 9ಲಕ್ಷ ಚಿಲ್ಲರೆ ಕೋಟಿ ಕಟ್ಟುತ್ತಾರೆ ಎಂದು ವಿವರಿಸಿದರು.
ನರೇಂದ್ರ ಮೋದಿ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಭಾಷಣ ಹೊಡೆದಿದ್ದೇ ಹೊಡೆದಿದ್ದು,ಅಚ್ಛೇದಿನ್ ಆಯೇಗಾ ಎಂದು ಹೇಳ್ತಾನೆ ಬಂದ್ರು.
ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲದರ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಜೀವನ ನಡೆಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇವರಿಂದ ಏನಾದರೂ ಒಳ್ಳೆಯ ಬಜೆಟ್ ನಿರೀಕ್ಷಿಸಲಿಕ್ಕಾಗತ್ತಾ? ಕರ್ನಾಟಕ 20ವರ್ಷ ಹಿಂದಕ್ಕೆ ಹೋಗಿದೆ. ಒಂದೇ ಒಂದು ಮನೆ ಮಂಜೂರು ಮಾಡಿರೋದನ್ನು ತೋರಿಸಿ ಎಂದು ಸಿದ್ದು ಸವಾಲು ಹಾಕಿದರು.
ಭವಿಷ್ಯದೆಡೆಗೆ ಭರವಸೆಗಳ ಹೆಜ್ಜೆ ಎಲ್ಲಿದೇರಿ ಭವಿಷ್ಯ ಎಂದು ಪ್ರಶ್ನಿಸಿದರು.