ನವದೆಹಲಿ:ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕತೆಯನ್ನು ಬಿಂಬಿಸುವ ಯಾವುದೇ ಉಡುಪುಗಳನ್ನು ಧರಿಸದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಮೌಕಿಕ ಆದೇಶಕ್ಕೆ ತಡೆಯಾಜ್ಞೆ ನೀಡಲು ಹಾಗೂ ಪ್ರಕರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಗುರುವಾರ ಹೈಕೋರ್ಟ್ನಲ್ಲಿ ನೀಡಲಾಗಿದ್ದ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಅರ್ಜಿದಾರರ ಮನವಿಯಂತೆ ಪ್ರಕರಣದ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರಾಕರಿಸಿದೆ.
ಕರ್ನಾಟಕ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ್ದೇವೆ ಹಾಗೆಯೇ ಹಿಜಾಬ್ ಪ್ರಕರಣದ ವಿಚಾರಣೆಯನ್ನು ನಾವು ಗಮನಿಸುತ್ತಿದ್ದೇವೆ. ಈ ಪ್ರಕರಣವನ್ನು ರಾಷ್ಟ್ರೀಯ ವಿವಾದವನ್ನಾಗಿ ಬೆಳೆಸುವುದು ಸೂಕ್ತವೇ ಎಂಬುದನ್ನು ನೀವು ಪರಿಶೀಲಿಸಿ. ನಾವು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಬದ್ಧರಿದ್ದೇವೆ ಎಂದು ಪೀಠ ಹೇಳಿದೆ.
ಆದರೆ ಪ್ರಕರಣದಲ್ಲಿ ಜೇಷ್ಠತೆಯ ಆಳಕ್ಕೆ ಹೋಗುವುದು ಬೇಡ. ಒಂದು ವೇಳೆ ವಿದ್ಯಾರ್ಥಿಗಳ ಪರೀಕ್ಷೆ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾದರೆ ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತನ್ನಿ, ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಅರ್ಜಿದಾರರ ಪರ ವಾದಿಸಿದ ವಕೀಲ ಆರಿಫ್ ಜಮೀಲ್, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ಧರಿಸದಂತೆ ಹೈಕೋರ್ಟ್ ನೀಡಿರುವ ಆದೇಶ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
ಸೂಕ್ತ ಕಾನೂನು ಇಲ್ಲದೆ ಸಂವಿಧಾನಬದ್ಧವಾಗಿ ಆರ್ಟಿಕಲ್ 19 (ಎ) (ಬಿ) ಅಡಿ ನೀಡಿರುವ ಧಾರ್ಮಿಕ ಆಚರಣೆ ಮತ್ತು ಕಲಂ 25ರ ಅಡಿ ನೀಡಲಾಗಿರುವ ಖಾಸಗಿತನ ರಕ್ಷಣೆಯ ಹಕ್ಕನ್ನು ಉಲ್ಲಂಘಿಸಿದಂತಾಗಿದೆ ಎಂದು ವಾದಿಸಿದರು.
ಫೆಬ್ರವರಿ 15 ರಿಂದ ಪ್ರಾಕ್ಟಿಕಲ್ ಪರೀಕ್ಷೆಗಳು ಶುರುವಾಗಲಿವೆ. ಈ ಆದೇಶದಿಂದ ಮುಸ್ಲಿಂ ಮಹಿಳೆಯರ ಶಿಕ್ಷಣದ ಹಕ್ಕನ್ನು ಕಸಿದಂತಾಗುತ್ತದೆ.
ಮುಸ್ಲಿಂ ಸಮುದಾಯದ ಧರ್ಮಾಚರಣೆಯ ಹಕ್ಕನ್ನು ಅಮಾನತು ಮಾಡಿದಂತಾಗಿದೆ ಎಂದು ಹೇಳಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಸರ್ಕಾರದ ಪರವಾಗಿ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ಇನ್ನೂ ಪೂರ್ಣ ಪ್ರಮಾಣದ ತೀರ್ಪು ನೀಡಿಲ್ಲ, ಆಗಲೇ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಹೇಗೆ ಸಾಧ್ಯ. ಮೊದಲು ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಗೊಳಿಸಲು ಅವಕಾಶ ನೀಡಬೇಕು. ಇದನ್ನು ರಾಜಕೀಯ ಮತ್ತು ಧಾರ್ಮಿಕ ವಿವಾದವನ್ನಾಗಿ ಮಾಡಬಾರದು ಎಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ಬಳಿಕ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು, ಹೈಕೋರ್ಟ್ ವಿಚಾರಣೆ ನಡೆಸಲು ಅವಕಾಶ ನೀಡೋಣ. ನಾವಿಲ್ಲಿ ಕುಳಿತಿರುವುದೇ ಎಲ್ಲರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ. ಸೂಕ್ತ ಸಮಯದಲ್ಲಿ ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್ ಹಾಜರಾಗಿದ್ದರು.