ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವ ಆರೋಪ

ವಾರಣಾಸಿ: ಕಾಂಗ್ರೆಸ್ ಸೇರಿ ಕೆಲವು ಪಕ್ಷಗಳಿಗೆ ಅಭಿವೃದ್ಧಿಯ ವಿಷಯಗಳು ಚರ್ಚೆಯಾಗುವುದು ಬೇಕಿಲ್ಲ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಎರಡನೇ ಹಂತದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

2014ರ ಬಳಿಕ ಕೆಲವು ವಿರೋಧ ಪಕ್ಷಗಳು ಅಂತಾರಾಷ್ಟ್ರೀಯ ಜಾಲದೊಂದಿಗೆ ಕೈ ಜೋಡಿಸಿ ವಿವಾದವನ್ನು ಸೃಷ್ಟಿಸುತ್ತಿವೆ ಎಂದು ದೂರಿದರು.

ರಫೇಲ್, ಸಿಎಎ, ಹಿಜಬ್ ಸೇರಿದಂತೆ ಹಲವಾರು ವಿವಾದಗಳು ಚರ್ಚೆಯಾಗಿವೆ. ಆದರೆ, ಜನ ಇದನ್ನು ಒಪ್ಪಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ನಂಬಿಕೆ ಇಟ್ಟಿದ್ದಾರೆ. ಬಿಜೆಪಿಯನ್ನು ಗೆಲ್ಲಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ತೃಷ್ಠೀಕರಣದ ಮೂಲದ ಮತಬ್ಯಾಂಕ್‍ನ್ನು ಕ್ರೂಢೀಕರಿಸುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿಯೇ ಸಮಾಜವಾದಿ ಪಕ್ಷ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಭವಿಷ್ಯವನ್ನು ಕಳೆದುಕೊಳ್ಳುತ್ತಿವೆ ಎಂದು ಹೇಳಿದರು.