ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಗೆ ಎದುರಾಗಿರುವ ಅಪಾಯದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಪ್ರತಿಕ್ರಿಯಿಸಿದ ಅವರು, ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಮ್ ಕೋರ್ಟ್ ಹೇಳಿದೆ.
ದೇಶದಲ್ಲಿಯೇ ಮೊದಲಬಾರಿಗೆ ಮನೆಮನೆಗೆ ತೆರಳಿ ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ ಎಂದರು.
ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡಾ ಸಂಗ್ರಹಿಸಿದೆ. ರಾಜ್ಯಸರ್ಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಂಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು ಎಂದರು.
ರಾಜ್ಯ ಬಿಜೆಪಿ ಸರ್ಕಾರ ಕಾಲ ವ್ಯಯಮಾಡದೆ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ತರಬೇಕು ಎಂದು ಸಿದ್ದು ಆಗ್ರಹಿಸಿದರು.
ಇದೇ ವರದಿಯನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಮುಂದೆ ತನ್ನವಾದ ಮಂಡಿಸಿ ಹಿಂದುಳಿದ ಜಾತಿಗಳಿಗೆ ಆಗಲಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಮನೆಮನೆಗೆ ಹೋಗಿ ಜನತೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದ್ದೆ.
ಇದರಲ್ಲಿ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ನಿಖರವಾದ ಮಾಹಿತಿ ಇರುವುದರಿಂದ ಬೇರೆ ರಾಜ್ಯಗಳಂತೆ ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯ ಇರಲಾರದು ಎಂದು ತಿಳಿಸಿದರು.
2010ರಲ್ಲಿಯೇ ಸುಪ್ರೀಂಕೋರ್ಟ್ ರಾಜಕೀಯ ಮೀಸಲಾತಿಗೆ ಪ್ರತ್ಯೇಕ ಮಾನದಂಡ ರೂಪಿಸುವಂತೆ ಆದೇಶಿಸಿತ್ತು. ಆ ಆದೇಶವನ್ನು ಪರಿಶೀಲಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೆ. ಅದೇ ಸಮಿತಿಯನ್ನು ಪುನರ್ ರಚಿಸಿ ಈಗಿನ ಬಿಕ್ಕಟ್ಟಿಗೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂಕೋರ್ಟ್ ವಿಸ್ತೃತ, ವಿಶ್ವಾಸಾರ್ಹ ಅಂಕಿ-ಅಂಶಗಳ ಆಧಾರವನ್ನು ಕೇಳುತ್ತಾ ಬಂದಿದೆ. ಇದು ಕರ್ನಾಟಕದಲ್ಲಿ ನಡೆದಂತೆ ಮನೆಮನೆಗೆ ಹೋಗಿ ಸಂಗ್ರಹಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ ಸರಿಯಾದ ಉತ್ತರವಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಕ್ಷಣ ವಿರೋಧಪಕ್ಷಗಳ ನಾಯಕರು ಮತ್ತು ಕಾನೂನು ತಜ್ಞರ ಸಭೆ ಕರೆದು ಚರ್ಚೆ ನಡೆಸಿ, ಸುಪ್ರೀಮ್ ಕೋರ್ಟ್ ಆದೇಶದಿಂದ ಉದ್ಭವವಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಅಭಿಪ್ರಾಯ ಪಡೆದು ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.