ಹಾಸನ: ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬರುತ್ತದೋ ನೋಡೋಣ. ಆದರೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಹೃದಯದಲ್ಲಿ ವಿಷ ತುಂಬುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದರಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಅಡಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸಣ್ಣ ಪ್ರಮಾಣದಲ್ಲಿದ್ದ ಹಿಜಾಬ್ ವಿವಾದವನ್ನು ದೊಡ್ಡದು ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದರಲ್ಲಿ ಎಲ್ಲಾ ಸಮಾಜದ ಸಂಘಟನೆಗಳ ಪಾತ್ರವೂ ಇದೆ. ಇದು ವ್ಯವಸ್ಥಿತವಾಗಿ ಶುರುವಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಇದೆ. ಅದಕ್ಕೆ ಈ ವಿಷಯವನ್ನು ದೇಶವ್ಯಾಪಿ ಹರಡುವಂತೆ ಮಾಡಲಾಗುತ್ತಿದೆ. ಜನ ಇಂಥ ಭಾವನಾತ್ಮಕ ವಿಷಯಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
ನಮಗೆಲ್ಲರಿಗೂ ಬೇಕಿರುವುದು ಬದುಕು ಮಾತ್ರ. ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಸಮಾಜವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದು ಹೇಳಿದರು.
ಯಾವುದೋ ಒಂದು ಶಾಲೆಯಲ್ಲಿ ಆರಂಭವಾದ ಹಿಜಬ್ ವಿವಾದವನ್ನು ಅಲ್ಲಿಯೇ ಮುಗಿಸಬೇಕಿತ್ತು. ಆದರೆ ಅದನ್ನು ಅಲ್ಲಿಗೇ ಬಿಡುವುದು ಕೆಲವರಿಗೆ ಬೇಕಿರಲಿಲ್ಲ ಅದಕ್ಕಾಗಿ ದೇಶವ್ಯಾಪಿಗೊಳಿಸಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ವಿವಾದ ದೊಡ್ಡ ಮಟ್ಟದಲ್ಲಿ ಹರಡಿದರೆ ಇದರ ಮೆಲೆ ಭಾವನಾತ್ಮಕ ವಿಚಾರ ಇಟ್ಟು ಮತಗಳನ್ನಾಗಿ ಪರಿವರ್ತನೆ ಮಾಡಬಹುದು ಎಂಬ ದುರಾಲೋಚನೆ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಎಲ್ಲಾ ದುಷ್ಟ ಪ್ರಯತ್ನಗಳು ನಡೆಯುತ್ತಿವೆ, ಆದರೆ ಯಾವ ಕ್ಷಣದಲ್ಲಿ ಇದು ಯಾರಿಗೆ ತಿರಗುಬಾಣ ಆಗುತ್ತದೊ ನೋಡೊಣ ಎಂದು ಮಾರ್ಮಿಕವಾಗಿ ನುಡಿದರು.
ಪೋಷಕರು ಎಚ್ಚರ ವಹಿಸಬೇಕು. ನಿಮ್ಮ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ಯಾವುದೇ ಸಂಘಟನೆ ಇರಲಿ, ಅಂಥವರಿಗೆ ಅವಕಾಶ ಕೊಡಬೇಡಿ ಎಂದು ಕಿವಿಮಾತು ಹೇಳಿದರು.