ಸವದತ್ತಿ ಯಲ್ಲಮ್ಮನ ಮಹಿಮೆ ಅಪಾರ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಉತ್ತರ ಕರ್ನಾಟಕದ ಜನರ ಪಾಲಿಗೆ ಆರಾಧ್ಯ ದೇವತೆ, ಶ್ರೀ ರಕ್ಷೆ ನೀಡುವ ಮಾತೆಯಾಗಿರುವ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಇಂದು ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಭಕ್ತರಿಗೆ ಜಾತ್ರೆಯಲ್ಲಿ ಭಾಗವಹಿಸುವ ಅವಕಾಶವಿರಲಿಲ್ಲ. ಈಗ ಕೋವಿಡ್ ಸೋಂಕು ಕಡಿಮೆ ಆಗಿರುವುದರಿಂದ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.

ದಕ್ಷಿಣ ಕರ್ನಾಟಕದವರಿಗೆ ಶ್ರೀಚಾಮುಂಡೇಶ್ವರಿ ದೇವಿ ಆರಾಧ್ಯ ದೇವತೆಯೋ ಹಾಗೆ ಉತ್ತರ ಕರ್ನಾಟಕದವರಿಗೆ ಈ ರೇಣುಕಾ ಯಲ್ಲಮ್ಮ ದೇವಿಯು.

ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ರಾಜ್ಯದ ಪ್ರಮುಖ ದೇವತೆಯ ಶಕ್ತಿ ದೇವತೆಯ ಕ್ಷೇತ್ರಗಳಲ್ಲಿ ಒಂದು. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸವದತ್ತಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚು,ಅಷ್ಟೇ ಅಲ್ಲದೆ ರಾಜ್ಯದ ಇತರ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರ ತಮಿಳುನಾಡುಗಳಿಂದಲೂ ಲಕ್ಷಾಂತರ ಭಕ್ತರು ರೇಣುಕಾ ಎಲ್ಲಮ್ಮ ದೇವತೆಯ ದರ್ಶನಕ್ಕೆ ಬರುತ್ತಾರೆ.

ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವುದು ಈ ಕ್ಷೇತ್ರದ ವಿಶೇಷ. ದವನ, ಮಹಾನವಮಿ, ಶ್ರೀ ಗೌರಿ, ಹೊಸ್ತಿಲ, ಬನದ ಹಾಗೂ ಭರತ ಹುಣ್ಣಿಮೆಗಳಂದು ಇಲ್ಲಿ ಜಾತ್ರೆ ನಡೆಯುತ್ತದೆ.

ಬನದ ಹಾಗೂ ಭರತ ಹುಣ್ಣಿಮೆ ಸಮಯದಲ್ಲಿ ನಡೆಯುವ ಜಾತ್ರೆಗಳು ಅತ್ಯಂತ ದೊಡ್ಡ ಜಾತ್ರೆಗಳು.

ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿಯ ದರ್ಶನವನ್ನು ಪಡೆಯುತ್ತಾರೆ. ಜಾತ್ರೆಗೆ ಲಕ್ಷಾಂತರ ಭಕ್ತರು ಚಕ್ಕಡಿಗಳಲ್ಲಿ ಆಗಮಿಸುವುದು ಈ ಕ್ಷೇತ್ರದ ವಿಶೇಷ.

ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಬಯಲಿನಲ್ಲಿಯೇ ಅಡುಗೆ ಮಾಡಿ ಅಮ್ಮನಿಗೆ ನೈವೇದ್ಯ ಮಾಡುವ ಪರಿಪಾಠವಿದೆ.

ಸವದತ್ತಿ ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಸುಮಾರು ಮೂರು ಸಾವಿರ ವರ್ಷಗಳಷ್ಟು ಇತಿಹಾಸವಿದೆ.

ಸೌಂದತ್ತಿ ಅಥವಾ ಸವದತ್ತಿ ಪುರಾಣ ಪ್ರಸಿದ್ಧ ಶಕ್ತಿದೇವತೆಯ ಕ್ಷೇತ್ರ. ಸೌಗಂದವರ್ತಿ ಅಥವಾ ಸೌಗಂದಿಕಾಪುರ ಎಂಬುದು ಇದರ ಪ್ರಾಚೀನ ಹೆಸರು. ಇದು ತಾಯಿ ರೇಣುಕಾ ಯಲ್ಲಮ್ಮ ಅಥವಾ ತಾಯಿ ಎಲ್ಲಮ್ಮನ ನೆಲೆವೀಡು.

ಇಲ್ಲಿರುವ ಎಲ್ಲಮ್ಮನ ದೇವಸ್ಥಾನವನ್ನು ಸುಮಾರು 2,000 ವರ್ಷಗಳಷ್ಟು ಹಿಂದೆಯೇ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಆದರೆ ಈಗಿರುವ ದೇವಾಲಯ ಅಷ್ಟು ಪ್ರಾಚೀನವಾದ್ದಲ್ಲ, ಕ್ರಿ.ಶ. 1514ರಲ್ಲಿ ಬಾಗಿಬೊಮ್ಮಪ್ಪನಾಯಕ ಇದನ್ನು ಕಟ್ಟಿಸಿರುವನೆಂಬುದು ತಜ್ಞರ ಅಭಿಮತ. ಅಲ್ಲದೆ ದೇವಾಲಯದಲ್ಲಿರುವ ದೇವತೆ ಪದ್ಮಪುಷ್ಪಪಾಣಿಯಾದ ಯಕ್ಷಿ ಪದ್ಮಾವತಿಯದೆಂದೂ ಕೆಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ನೂರಾರು ವರ್ಷಗಳಿಂದ ಬೇಡಿ ಬರುವ ಭಕ್ತರ ಕೋರಿಕೆಯನ್ನು ಈಡೇರಿಸುತ್ತಾ ಇಲ್ಲಿ ನೆಲೆಸಿರುವ ತಾಯಿ ಎಲ್ಲಮ್ಮನೇ ಎಂಬುದು ಭಕ್ತರ ಅಚಲ ನಂಬಿಕೆ. ಜನಪದರು ಎಲ್ಲಮ್ಮನಿಗೆ ಉದೋ… ಉದೋ.. ಅನ್ರಪ್ಪ ಅಂತ ಹಾಡಿದ್ದಾರೆ. ತಾಯಿಯ ಮಹಿಮೆಯನ್ನು ಕೊಂಡಾಡಿದ್ದಾರೆ.

ಚಾಲುಕ್ಯ ಹಾಗೂ ರಾಷ್ಟ್ರಕೂಟರ ವಾಸ್ತುಶೈಲಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಎಲ್ಲಮ್ಮನಿಗೆ ವೀರಶೈವ ಸಂಪ್ರದಾಯದಂತೆ ನಿತ್ಯ ಪೂಜೆ ನಡೆಯುತ್ತದೆ.

ಕಾಶ್ಮೀರದ ದೊರೆಯಾದ ರೇಣುಕಾ ರಾಜನು ಸಂತಾನ ಭಾಗ್ಯವಿಲ್ಲದೆ, ಕೈಚೆಲ್ಲಿ ಕುಳಿತಿರುವಾಗ ಅಶರೀರವಾಣಿಯೊಂದು ನುಡಿಯುತ್ತದೆ. ಅದೇನೆಂದರೆ ಪುತ್ರಕಾಮೇಷ್ಠಿಯಾಗ ಮಾಡುವಂತೆ ಹೇಳಿತ್ತು. ಇದರಿಂದ ಪ್ರಭಾವಿತನಾದ ದೊರೆಯು ಪುತ್ರ ಕಾಮೇಷ್ಟಿ ಯಾಗವನ್ನು ಮಾಡುತ್ತಾನೆ. ಈ ಯಾಗದಲ್ಲಿ ಭಕ್ತಿಯಿಂದ ಬೇಡಿಕೊಂಡ ರಾಜನಿಗೆ ಅಗ್ನಿಕುಂಡದಿಂದ ದೇವರು ಒಂದು ಹೆಣ್ಣು ಮಗುವನ್ನು ವರವಾಗಿ ಕರುಣಿಸುತ್ತಾನೆ.

ಹೀಗೆ ಹುಟ್ಟಿದ ಹೆಣ್ಣು ಮಗುವೇ ರೇಣುಕಾ ಎಲ್ಲಮ್ಮ ದೇವಿ. ಸ್ಕಂದ ಪುರಾಣದಲ್ಲಿ ಈ ದೇವಿಯ ಚರಿತ್ರೆಯ ಬಗ್ಗೆ ಉಲ್ಲೇಖವಿದೆ.

ರೇಣುಕಾ ದೇವಿಯು ಪ್ರಾಪ್ತ ವಯಸ್ಸಿಗೆ ಬಂದಾಗ ಪ್ರತಿದಿನ ಮಲಪಾರಿ ನದಿಯ ದಂಡೆಯ ಬಳಿ ವಿಹಾರಕ್ಕೆ ಹೋಗುತ್ತಿರುತ್ತಾಳೆ. ಆ ಸಂದರ್ಭದಲ್ಲಿ ಒಂದು ದಿನ ಸಪ್ತ ಮಹರ್ಷಿಗಳಲ್ಲಿ ಮಹಾ ತಪಸ್ವಿಯಾದಂತಹ ಜಮದಗ್ನಿ ಋಷಿಯು ಪ್ರತಿನಿತ್ಯ ಸಂಧ್ಯಾವಂದನೆ ಮಾಡುವ ಸಲುವಾಗಿ ಮಲಪಾರಿ ನದಿಯ ದಂಡೆಗೆ ಬರುತ್ತಾನೆ.

ಆ ಸಂದರ್ಭದಲ್ಲಿ ರೇಣುಕಾದೇವಿ ಮತ್ತು ಜಮದಗ್ನಿಯ ಸಮಾಗಮವಾಗುತ್ತದೆ. ಆಗ ರೇಣುಕಾದೇವಿ ತನ್ನಲ್ಲಿ ತಾನು ಪ್ರಶ್ನೆ ಮಾಡಿಕೊಳ್ಳುತ್ತಾಳೆ ಎಂತಹ ಮಹಾತಪಸ್ವಿಗಳಾಗಿದ್ದಾರೆ ಇವರು. ನಾನು ಯಾಕೆ ಇವರನ್ನು ವಿವಾಹ ಮಾಡಿಕೊಳ್ಳಬಾರದು ಎಂದು ಜಮದಗ್ನಿಯನ್ನು ಪ್ರಶ್ನೆ ಮಾಡುತ್ತಾಳೆ. ಪುರಾಣಗಳಲ್ಲಿ ಉಲ್ಲೇಖವಿರುವ ಜಮದಗ್ನಿ ಮುನಿಯ ಪತ್ನಿ ರೇಣುಕಾ ತಾಯಿಯ ಎಲ್ಲಮ್ಮ. ಪರಶುರಾಮ ಜಮದಗ್ನಿ ಹಾಗೂ ರೇಣುಕಾ ದಂಪತಿಯ ಮಗ. ಮಗನಿಗೆ ನೀಡಿದ ವಾಗ್ದಾನದಂತೆ ತಾಯಿ ರೇಣುಕಾ ಎಲ್ಲಮ್ಮನ್ನಾಗಿ 7 ಕೊಳ್ಳಗಳು ಇರುವ ಸವದತ್ತಿಗೆ ಬಂದು ಪ್ರತಿಷ್ಠಾಪನೆಗೊಂಡಳು ಎಂಬ ಐತಿಹ್ಯವಿದೆ.

ಸವದತ್ತಿಯಲ್ಲಿ ಜಮದಗ್ನಿ ಋಷಿ, ಪರಶುರಾಮ, ಮಲ್ಲಿಕಾರ್ಜುನ, ದತ್ತಾತ್ರೇಯ, ಮಾತಂಗಿ, ಅನ್ನಪೂರ್ಣೇಶ್ವರಿಯವರ ದೇವಸ್ಥಾನಗಳಿವೆ.

ಮಕ್ಕಳು ಇಲ್ಲದವರು ಎಲ್ಲಮ್ಮನ ದೇವಸ್ಥಾನದಲ್ಲಿರುವ ಪರಶುರಾಮನ ತೊಟ್ಟಿಲು ತೂಗುವ ಹರಕೆಯನ್ನು ಹೊತ್ತು ತೊಟ್ಟಿಲನ್ನು ತೂಗುತ್ತಾರೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

ಅರಿಶಿಣ ಅಥವಾ ಬಂಡಾರವನ್ನು ಯಲ್ಲಮ್ಮ ತಾಯಿಗೆ ಅರ್ಪಿಸುವುದು ಇಲ್ಲಿನ ಮುಖ್ಯ ಸೇವೆ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಗುಡಿಯ ಮೇಲೆ ಭಂಡಾರವನ್ನು ಎರಚುತ್ತಾರೆ.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಅರಿಶಿನದಲ್ಲಿಯೇ ಮಿಂದು ಹೇಳುವಂತಹ ಪ್ರತೀತಿಯೂ ಸಹ ಇದೆ.

ಪ್ರತಿದಿನ ದೇವಸ್ಥಾನದ ಬಾಗಿಲು ಬೆಳಗಿನ ಜಾವ ನಾಲ್ಕು ಗಂಟೆಗೆ ತೆರೆಯುತ್ತದೆ. ಬೆಳಗಿನ ಅವಧಿಯ ಅಭಿಷೇಕ, ಪೂಜೆಯ ನಂತರ ಸಾರ್ವಜನಿಕರ ದರ್ಶನ ಆರಂಭವಾಗುತ್ತದೆ. ಸಂಜೆ 4:30 ರಿಂದ 6 ಗಂಟೆಯವರೆಗೆ ಮತ್ತೆ ಅಭಿಷೇಕ ಪೂಜೆಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿ ನಿತ್ಯ ಬೆಳಗಿನ ಜಾವ 1:30 ರಿಂದ 5 ಗಂಟೆಯವರೆಗೆ ಮತ್ತು ಸಂಜೆ 4:30 ರಿಂದ 6:30 ರವರೆಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.

ಸವದತ್ತಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಾಕಷ್ಟು ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಸತಿ ಗೃಹಗಳು, ಯಾತ್ರಿ ನಿವಾಸ, ಶೌಚಾಲಯ, ಸ್ನಾನ ಗೃಹ, ಕುಡಿಯುವ ನೀರು, ಮತ್ತು ಮತ್ತಿತರ ಸೌಕರ್ಯಗಳನ್ನು ವ್ಯವಸ್ಥೆಯನ್ನು ಮಾಡಲಾಗಿದೆ.

ವಿವಿಧ ರಾಜ್ಯ ಗಳಿಂದ ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಈ ಜಾತ್ರೆಗೆ ಲಕ್ಷಾಂತರ ಭಕ್ತರು ವಾಹನಗಳ ಜತೆಗೆ ಚಕ್ಕಡಿಗಳಲ್ಲೂ ಬರುತ್ತಾರೆ. ಈಗಾಗಲೇ ಸವದತ್ತಿಗೆ ಬಂದಿರುವ ಭಕ್ತರು ಜೋಗುಳಬಾವಿ ಬಳಿ, ಮಲಪ್ರಭಾ ನದಿ ದಂಡೆ ಹಾಗೂ ಯಲ್ಲಮ್ಮನಗುಡ್ಡದಲ್ಲಿರುವ ವಿಶಾಲವಾದ ಜಾಗದಲ್ಲಿ ಬಿಡಾರ ಹೂಡಿದ್ದಾರೆ. ‘ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ’ ಎಂಬ ಜೈಕಾರ ಮುಗಿಲು ಮುಟ್ಟಿದೆ.

ಅಂಗಡಿ–ಮುಂಗಟ್ಟುಗಳು ಸಿಂಗಾರಗೊಂಡಿವೆ. ಕುಂಕುಮ ಭಂಡಾರ, ಕಾಯಿ, ಕರ್ಪೂರ, ಬಾಳೆಹಣ್ಣು, ಸೀರೆ–ಕುಪ್ಪಸ, ಮಿಠಾಯಿ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ.

ಭಾರತ ಹುಣ್ಣಿಮೆಗೆ ಬರುವ ಪ್ರತಿಯೊಬ್ಬ ಮಹಿಳೆ ಹಸಿರು ಬಳೆ ಧರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ.

ಸಾಕಷ್ಟು ಪವಾಡಗಳನ್ನು ಸೃಷ್ಟಿಸಿ ಇಲ್ಲಿನ ಜನರಿಗೆ ಆಸರೆಯಾಗಿರುವ, ಸಾಕಷ್ಟು ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿರುವ ಮತ್ತು ಒಟ್ಟಾರೆ ಹೇಳಬೇಕೆಂದರೆ ಸಾಕಷ್ಟು ಮಹಿಮೆಯನ್ನು ಹೊಂದಿರುವ ರೇಣುಕಾ ಯಲ್ಲಮ್ಮ ಕ್ಷೇತ್ರವು ಭಕ್ತರ ಪಾಲಿಗೆ ವರವನ್ನು ಕರುಣಿಸುತ್ತ, ಆಸರೆಯಾಗಿ ನಿಂತಿದ್ದಾಳೆ.

ಎಲ್ಲಮ್ಮ ದೇವಾಲಯಕ್ಕೆ ಎಲ್ಲ ಜಾತಿ, ಮತ, ಪಂಥಗಳ ಭಕ್ತರೂ ಆಗಮಿಸುವುದು ವಿಶೇಷ. ನಿತ್ಯವೂ ಇಲ್ಲಿಗೆ ಹೊಸ ಹೊಸ ಭಕ್ತರು ಬರುವುದು ಮತ್ತೊಂದು ವಿಶೇಷ. ಯಾವ ದಿನ ನನ್ನ ದೇವಾಲಯಕ್ಕೆ ಹೊಸ ಭಕ್ತರು ಬರುವುದಿಲ್ಲವೋ ಅಂದು ತಾನಲ್ಲಿ ಇರುವುದಿಲ್ಲ ಎಂದು ತಾಯಿ ಹೇಳಿದ್ದಾಳೆಂದೂ ಹೇಳಲಾಗುತ್ತದೆ.

ಸವದತ್ತಿಯ ಗುಡ್ಡದಲ್ಲಿ ನೆಲೆ ನಿಂತಿರುವ ಯಲ್ಲಮ್ಮ ದೇವಿಯು ತನ್ನ ಹತ್ತಿರ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾಳೆ.