ಅಜ್ನಾನ ಒಂದು ಮುಳ್ಳು; ಆ ಮುಳ್ಳನ್ನು ಜ್ನಾನ ಎಂಬ ಇನ್ನೊಂದು ಮುಳ್ಳಿನಿಂದ ತೆಗೆಯಬೇಕು’ ಎಂದ ರಾಮಕೃಷ್ಣ ಪರಮಹಂಸರು

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಲೇಖಕರು ಮತ್ತು ಉಪನ್ಯಾಸಕರು

dr.guruhs@gmail. com

ತಮ್ಮ ಇಡೀ ಬದುಕನ್ನೇ ಅವರು ಪ್ರಯೋಗಶಾಲೆಯಾಗಿಸಿಕೊಂಡು ತಾವು ಕಂಡುಕೊಂಡ ಸತ್ಯವನ್ನು ಸುತ್ತಲಿನವರಿಗೆ ಹಂಚುತ್ತಾ  ಧರ್ಮದ, ಮತದ ಹೆಸರಿನಲ್ಲಿ ಛಿದ್ರ ಛಿದ್ರ ಭಾವಗಳು ಹರಡುತ್ತಿರುವ ಕಾಲದಲ್ಲಿ ಎಲ್ಲ ಧರ್ಮಗಳನ್ನು ಅವುಗಳ ಮೂಲ ಬೋಧನೆ ಮತ್ತು ಆಚರಣೆಗಳ ಮೂಲಕ ಭಗವಂತನಲ್ಲಿ ತಲುಪುವ ಸಾಧನಗಳೆಂದು ಘೋಷಿಸಿದ ಪರಮಹಂಸ ರಾಮಕೃಷ್ಣರ 186ರ ಜನ್ಮದಿನವಿಂದು.

ಶ್ರೀ ರಾಮಕೃಷ್ಣ ಪರಮಹಂಸರ ಬೋಧನೆಗಳು ಎಂದಿಗೂ ಪ್ರಸ್ತುತವೇ ಆಗಿದೆ. ಅದರಲ್ಲೂ ಇಂದಿನ ಕಾಲಮಾನವನ್ನು ಕಂಡಾಗ ಹೆಚ್ಚು ಪ್ರಸ್ತುತವೆನಿಸಿದರೆ ತಪ್ಪಾಗಲಾರದು.

ಯಾಕೆಂದರೆ, ಶ್ರೀ ರಾಮಕೃಷ್ಣರು ಹೇಳುತ್ತಾರೆ ‘ಜತೋ ಮತ್ ತಥೋ ಪಥ್’ ಅಂತ. ಅಂದರೆ ಎಷ್ಟು ಮತಗಳೋ ಅಷ್ಟು ಪಥಗಳು ಅಂತ ತಮ್ಮ ಜೀವನದಲ್ಲಿತೋರಿಸಿದ್ದಾರೆ. ಶ್ರೀ ರಾಮಕೃಷ್ಣರು ಯಾವತ್ತೂ ಕೂಡ ಜಾತಿ, ಮತ ಭೇದವನ್ನು ಒಪ್ಪಲೇ ಇಲ್ಲ. ಈಗಿನ ಕಾಲದಲ್ಲಿ ಮನುಷ್ಯ ಜಾತಿ, ಮತ, ಬೇಧಗಳಿಂದ ಮೃಗತ್ವವನ್ನು ಹೊಂದಿದ್ದಾರೆ.

ಕೌಟುಂಬಿಕ ಸಾಮರಸ್ಯವೇ ಹದಗೆಟ್ಟಿದೆ. ತಂದೆ ತಾಯಿಗಳಲ್ಲಿಗೌರವ ಇಲ್ಲದಂತಾಗಿದೆ. ಇವೆಲ್ಲವನ್ನೂ ಗಮನಿಸಿದಾಗ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸಾಕಷ್ಟು ನಕಾರಾತ್ಮಕ ಭಾವನೆಗಳು ಕಂಡು ಬರುತ್ತಿವೆ.

ಶ್ರೀ ರಾಮಕೃಷ್ಣರ ಚಿಂತನೆಗಳಲ್ಲಿ ಸಕಾರಾತ್ಮಕ ಭಾವನೆಯಿದೆ. ಅವರ ಜೀವನವನ್ನು ನಾವು ಅಧ್ಯಯನ ಮಾಡಿದರೆ ಗಮನಿಸಬೇಕಾದ ಸಂಗತಿಯೆಂದರೆ ಸಾಧನೆಯ ತೀವ್ರತೆ. ವಿದ್ಯಾರ್ಥಿಗಳು ಈ ಅಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ತಾನಾಗೇ ಸಿದ್ಧವಾಗುತ್ತದೆ.

ಮತ್ತೊಂದು ಸಂಗತಿಯೆಂದರೆ ಅವರು ಗೃಹಸ್ಥರಾಗಿ, ಸನ್ಯಾಸಿಯಾಗಿ, ಅಧ್ಯಾತ್ಮ ಸಾಧಕರಾಗಿ ಹೇಗಿರಬೇಕೆಂದು ನಮಗೆ ತೋರಿಸಿಕೊಟ್ಟಿದ್ದಾರೆ.

ಅವರು ಈ ಲೋಕಕ್ಕೆ  ವಿವೇಕಾನಂದರಂತ ಶಿಷ್ಯರನ್ನು ಕೊಡುಗೆಯಾಗಿ ನೀಡಿದರು.

ಕಾಮಾರಪುಕುರವೆಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶ್ರೀರಾಮಕೃಷ್ಣರ ಮೂಲ ಹೆಸರು ಗದಾಧರ. ಗದಾಧರ (ವಿಷ್ಣು) ಕೃಪೆಯಿಂದ ಹುಟ್ಟಿದ ಶಿಶು ಎಂಬ ಕಾರಣಕ್ಕೆ ಅವರ ತಂದೆ ಕ್ಷುಧಿರಾಮ ಈ ಹೆಸರನ್ನಿಟ್ಟರಂತೆ. ತಾಯಿ, ಚಂದ್ರಮಣಿ ದೇವಿ. ತಂದೆ-ತಾಯಿ ಇಬ್ಬರೂ ಸಜ್ಜನರೂ ಸದಾಚಾರಿಗಳೂ ಆದವರು.

ಈ ಮಗುವು ಬಾಲ್ಯದಿಂದಲೇ ಭಗವದಭಿಮುಖವಾದದ್ದಕ್ಕೆ ಅವರು ಸಂತಸವನ್ನೇ ಪಟ್ಟರು. ಆದರೆ ಯಾವಾಗ ಮಗುವು ವಿದ್ಯೆ – ಅಂದರೆ ಅಕ್ಷರ ವಿದ್ಯೆಯ ಕಲಿಕೆಯ ಕಡೆಗೆ ಆಸಕ್ತಿ ತೋರಲಿಲ್ಲವೊ ಆಗ ಅಣ್ಣ ರಾಮಕುಮಾರನಿಗೆ ತಮ್ಮನ ಭವಿಷ್ಯದ ಬಗ್ಗೆ ಚಿಂತೆ ಹತ್ತಿತು. ಅವನು ಅವರನ್ನು ಕಲ್ಕತ್ತೆಗೆ ಕರೆದೊಯ್ದ. ಮುಂದೆ ಅಣ್ಣ-ತಮ್ಮ ಇಬ್ಬರೂ ರಾಣಿ ರಾಸಮಣಿಯು ಕಟ್ಟಿಸಿದ ಭವತಾರಿಣಿ ಕಾಳಿ ಮಂದಿರದಲ್ಲಿ ಅರ್ಚಕರಾದರು.

ಕ್ರಮೇಣ ಗದಾಧರ – ಅಂದರೆ ರಾಮಕೃಷ್ಣ (ರಾಣಿಯ ಅಳಿಯ ಮಥುರನಾಥ ವಿಶ್ವಾಸ ಈ ಹೆಸರನ್ನು ಅವರಿಗೆ ಗಟ್ಟಿ ಮಾಡಿದ) ಕಾಳಿಯ ಪ್ರಧಾನ ಅರ್ಚಕರಾದರು. ಅವರ ಪಾಲಿಗೆ ಪೂಜೆ, ಅರ್ಚನೆ, ದೇವತಾ ಕೈಂಕರ್ಯ ಕೇವಲ ಕ್ರಿಯೆಯಾಗಿರಲಿಲ್ಲ. ಅವರಿಗೆ ಕಾಳಿಯ ಮೂರ್ತಿ ಕೇವಲ ವಿಗ್ರಹವಾಗಿರಲಿಲ್ಲ. ಪೂಜಕನು ಪೂಜಿತ ವಸ್ತುವಿನಲ್ಲಿ ಚೈತನ್ಯವನ್ನು ದೀಪ್ತಗೊಳಿಸುವ ಪರಿ ಅದಾಗಿತ್ತು.

ಜಗತ್ತು ಈ ಅದ್ಭುತ ಪವಾಡವನ್ನು ಬೆರಗಿನಿಂದ ನೋಡಿತು, ಮೊದಲಿಗೆ ’ಹುಚ್ಚು ಪೂಜಾರಿ’ಎಂದಿತು. ಬಳಿಕ ಮಹಾಸಾಧಕ, ಸಿದ್ಧ ಎಂದಿತು. ಕೊನೆಗೆ ಅವತಾರಪುರುಷರಾದರು.

ಪ್ರಾಮಾಣಿಕತೆ, ಸತ್ಯಾನ್ವೇಷಣೆ ಮತ್ತು ಸ್ಥಿರತೆ.  ಅವರಲ್ಲಿ ಸತ್ಯವನ್ನು ಹಂಚುವ ಹಂಬಲವಿತ್ತೇ ಹೊರತು ವಿಮುಖತೆಯ ವೈರಾಗ್ಯವಾಗಲಿ, ಅಹಮಿಕೆಯ ಮೆರೆತವಾಗಲಿ ಇರಲಿಲ್ಲ. 

ಶ್ರೀ ರಾಮಕೃಷ್ಣರಿಗೆ ಭಗವಂತನ ಸಾಕ್ಷಾತ್ಕಾರವಾದಂತೆ ಪ್ರತಿಯೊಬ್ಬರಿಗೂ ದೈವ ಸಾಕ್ಷಾತ್ಕಾರ ಸಾಧ್ಯ. ಈ ಅಂಶವನ್ನು ಸ್ವತಃ ಶ್ರೀ ರಾಮಕೃಷ್ಣರೇ ಹೇಳಿದ್ದಾರೆ. ಪ್ರತಿಯೊಬ್ಬ ಮಾನವ ಆದರ್ಶನಾಗಬೇಕು. ಅವರೆನ್ನುತ್ತಾರೆ ಸತ್ಯ ಶಾಶ್ವತ ಎಂದ ಮೇಲೆ, ಒಬ್ಬನಿಗೆ ಸತ್ಯ ದರ್ಶನವಾಗಿದೆ ಎಂದರೆ ಬೇರೆ ಎಲ್ಲರಿಗೂ ಸತ್ಯ ದರ್ಶನ ಸಾಧ್ಯ. ಆದರೆ ಅದನ್ನು ಕಂಡುಕೊಳ್ಳಲು ಎಲ್ಲರೂ ಆ ಮಾರ್ಗದಲ್ಲಿ ಸಾಗಬೇಕು. ಆ ರೀತಿಯಾಗಿ ಸಾಧನೆ ಮಾಡಿದರೆ, ಗುರುಗಳನ್ನು ಉಪಾಸನೆ ಮಾಡಿದರೆ ಎಲ್ಲರಿಗೂ ಭಗವಂತನ ದರ್ಶನ ನೂರಕ್ಕೆ ನೂರರಷ್ಟು ಸಾಧ್ಯವಿದೆ.

ಮಹಾತ್ಮ ಗಾಂಧಿಜೀಯವರ ರಾಮಕೃಷ್ಣರ ಬಗ್ಗೆ ಹೀಗೆ ಹೇಳುತ್ತಾರೆ ಶ್ರೀ ರಾಮಕೃಷ್ಣ ಪರಮಹಂಸರ ಕಥೆಯೆಂದರೆ – ಜೀವಂತ ಧರ್ಮವೇನೆಂಬುದರ ಕಥೆಯಾಗಿದೆ.  ಅವರ ಜೀವನ ಚರಿತ್ರೆ-ದೇವರನ್ನು ಬದುಕಿನಲ್ಲಿ ಮುಖಾಮುಖಿ ನೋಡಲು ಸಹಾಯಮಾಡುತ್ತದೆ.  ಅವರ  ಚರಿತ್ರೆಯನ್ನೋದಿದವರಲ್ಲಿ – ದೇವನೊಬ್ಬನೇ ಸತ್ಯ, ಉಳಿದುದೆಲ್ಲವೂ ಮಾಯೆ ಎಂಬ ಅಭಿಪ್ರಾಯ ಖಂಡಿತಕ್ಕೂ ಮೂಡದಿರದು. 

ಅವರ ಮಾತುಗಳು ವಿದ್ವಾಂಸರ ಉಪನ್ಯಾಸಗಳಿಂತಿರದೆ ಜೀವನದ ಹಾಳೆಗಳೇ ಆಗಿವೆ.  ಆದುದರಿಂದ ಅವುಗಳ ಪರಿಣಾಮ ಅಚ್ಚೊತ್ತಿದಂತೆ.  ಇಂದಿನ ಸಂಶಯಗ್ರಸ್ತ ಆವರಣದಲ್ಲಿ, ಅನೇಕರು ಯಾವ ಧಾರ್ಮಿಕ ಆದರ್ಶವೂ ಇಲ್ಲದೆ ಅಲೆಯುತ್ತಿರುವ ಪರಿಸ್ಥಿತಿಯನ್ನು ತಪ್ಪಿಸಿ, ಅವರ ಬದುಕಿಗೆ ಬೆಳಕನ್ನು ತೋರಿ, ಶಾಂತಿ ಭರವಸೆಗಳನ್ನು ನೀಡಿದವರು ಅವರು. 

ಅವರ ಜೀವನವು ಅಹಿಂಸೆಯ ಪಾಠವೂ ಆಗಿದೆ.  ಅವರ ಪ್ರೇಮವೂ – ಯಾವುದರಿಂದಲೂ ಸೀಮಿತವಾಗದ ಅನಂತ ಪ್ರವಾಹವಾಗಿತ್ತು”ಚರಿತ್ರಕಾರ ಆರ್ನಾಲ್ಡ್ ಟಾಯನ್ಬಿ ಹೇಳುತ್ತಾರೆ: ‘ಶ್ರೀರಾಮಕೃಷ್ಣರ ಸಂದೇಶ ಒಂದು ಕ್ರಿಯಾತ್ಮಕ ಅಭಿವ್ಯಕ್ತಿ. ಧರ್ಮ ಕೇವಲ ಅಧ್ಯಯನದ ವಸ್ತುವಲ್ಲ, ಅದು ಜೀವನಕ್ರಮ ಮತ್ತು ಅನುಭವ. ಈ ಕ್ಷೇತ್ರದ ವಿಶೇಷತೆಯನ್ನು ತೋರಿದವರು ಶ್ರೀರಾಮಕೃಷ್ಣರು. ಭಾರತ ಅಥವಾ ಬೇರೆಲ್ಲಿಯೂ ಯಾವುದೇ ಧರ್ಮಶ್ರೇಷ್ಠನು ಏರಲಾರದ ಎತ್ತರವನ್ನು, ಅನುಭವವನ್ನು ಮುಟ್ಟಿದರು ಶ್ರೀರಾಮಕೃಷ್ಣರು.’

.ಒಮ್ಮೆ ಒಂದು ಉಪ್ಪಿನ ಬೊಂಬೆ ಸಮುದ್ರದ ಆಳ ತಿಳಿಯಲು ಬಯಸಿತಂತೆ. ಆದರೆ ಉಪ್ಪಿನ ಬೊಂಬೆ ಒಂದು ಹೆಜ್ಜೆಯನ್ನು ಸಮುದ್ರದಲ್ಲಿ ಇಟ್ಟ ಕ್ಷಣವೇ ಅದು ಕರಗಿ ಹೋಯ್ತಂತೆ. ಮನುಷ್ಯ ದೇವರನ್ನು ಅರಿಯಲು ಹೊರಟಾಗ ಅವನಲ್ಲಿ ಅಂತರ‍್ಗತವಾಗಿರುವ ಮಿತಿಗಳಿಂದಾಗಿಯೇ ಅವನಿಗೆ ಹೆಚ್ಚೇನೂ ಸಾಧಿಸಲಿಕ್ಕಾಗುವುದಿಲ್ಲ ಎಂದು ಮನದಟ್ಟು ಮಾಡಲು ಇದನ್ನು ಹೇಳುತ್ತಾರೆ.

ಅಜ್ನಾನ ಒಂದು ಮುಳ್ಳು; ಆ ಮುಳ್ಳನ್ನು ಜ್ನಾನ ಎಂಬ ಇನ್ನೊಂದು ಮುಳ್ಳಿನಿಂದ ತೆಗೆಯಬೇಕು ಎಂದು ಹೇಳಿ, ಮುಂದುವರಿದು, ಒಂದು ಸರ್ತಿ ಅಜ್ನಾನ ಎಂಬ ಮುಳ್ಳು ಹೋಯ್ತು ಎಂದರೆ ಎರಡೂ ಮುಳ್ಳುಗಳು ನಿರುಪಯುಕ್ತ, ಅವುಗಳನ್ನು ಎಸೆದು ಬಿಡಿ’ ಎನ್ನುತ್ತಾರೆ.

ಮೇಲ್ನೋಟಕ್ಕೆ ಅತಿ ಸರಳ ಎಂದನ್ನಿಸುವ ಈ ಹೇಳಿಕೆಯ ಬಗ್ಗೆ ಯೋಚಿಸಿದಷ್ಟೂ ಹೊಸ ಅರ್ಥ ಹೊಳೆಯುತ್ತದೆ. ಅಧ್ಯಾತ್ಮ ವಿಷಯಕ್ಕೆ ಬಂದರೆ ಅತ್ಯಂತ ಕ್ಲಿಷ್ಟ ಎನ್ನಿಸುವ ಸಂಗತಿಯನ್ನೂ ಬಹಳ ಸರಳವಾಗಿ ವಿವರಿಸುವವರು ಶ್ರೀ ರಾಮಕೃಷ್ಣರು. ಶ್ರೀರಾಮಕೃಷ್ಣ ಪರಮಹಂಸರ ಜಯಂತಿಯ ಪ್ರಯುಕ್ತ ಎಲ್ಲರೂ ಅವರ ಜೀವನ ಸಂದೇಶಗಳನ್ನು ಓದಬೇಕು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.