ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾ ತಪಸ್ವಿ ರಾಜೇಶ್ ಅವರು ಶನಿವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
ರಾಜೇಶ್ ಅವರಿಗೆ 86 ವರ್ಷ ವಯಸ್ಸಾಗಿತ್ತು.
ಫೆ.9ರಂದು ಉಸಿರಾಟದ ತೊಂದರೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 7.30ರ ಸುಮಾರಿಗೆ ರಾಜೇಶ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ವರನಟ ಡಾ.ರಾಜ್‍ಕುಮಾರ್, ಕಲ್ಯಾಣ್‍ಕುಮಾರ್, ಉದಯ್‍ಕುಮಾರ್ ಮತ್ತಿತರ ಹಿರಿಯ ನಟರ ಸಮಕಾಲೀನವರಾಗಿದ್ದ ರಾಜೇಶ್ ಅವರು ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು.
ರಾಜೇಶ್ ಅವರ ಪುತ್ರಿ ಆಶಾ ಅವರನ್ನು ಅರ್ಜುನ್ ಸರ್ಜಾ ಅವರು ವಿವಾಹವಾಗಿದ್ದಾರೆ.
ರಾಜೇಶ್ ಅವರ ಮೂಲ ಹೆಸರು ಮುನಿಚೌಡಪ್ಪ. ಚಿಕ್ಕ ವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು ರಂಗಭೂಮಿಯತ್ತ ಆಕರ್ಷಣೆ ಬೆಳೆಸಿಕೊಂಡರು.
ತಂದೆ-ತಾಯಿಗೆ ತಿಳಿಯದಂತೆ ಸುದರ್ಶನ ನಾಟಕ ಮಂಡಳಿ ಸೇರಿದ ಮುನಿಚೌಡಪ್ಪ ಅವರು ನಂತರ ಸ್ವಂತ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದರು.
ನಿರುದ್ಯೋಗಿ ಬಾಳು, ವಿಷ ಸರ್ಪ, ನಂದಾದೀಪ, ಚಂದ್ರೋದಯ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ನಾಟಕಗಳ ಮೂಲಕ ಗಮನ ಸೆಳೆದಿದ್ದರು.
ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಅವರು ಹುಣಸೂರು ಕೃಷ್ಣಮೂರ್ತಿ ಅವರ ವೀರ ಸಂಕಲ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶ್ರೀರಾಮಾಂಜನೇಯ ಯುದ್ಧ, ಗಂಗೆ ಗೌರಿ ಮುಂತಾದ ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
1968ರಲ್ಲಿ ತೆರೆಕಂಡ ನಮ್ಮ ಊರು ಚಿತ್ರದ ಮೂಲಕ ತಮ್ಮ ಹೆಸರನ್ನು ರಾಜೇಶ್ ಎಂದು ಬದಲಾಯಿಸಿಕೊಂಡರು. ಆ ಚಿತ್ರದ ಮೂಲಕ ಯಶಸ್ವಿ ಗಾಯಕರಾಗಿಯೂ ರಾಜೇಶ್ ಗುರುತಿಸಿಕೊಂಡರು. ಬೃಂದಾವನ, ಗಂಗೆ-ಗೌರಿ, ಸತಿ ಸುಕನ್ಯ,ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯಿತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬೆಳವಲದ ಮಡಿಲಲ್ಲಿ, ಬಿಡುಗಡೆ, ದೇವರ ದುಡ್ಡು, ಕಲಿಯುಗ, ಪಿತಾಮಹ ಮುಂತಾದ ಚಿತ್ರಗಳಲ್ಲಿ ರಾಜೇಶ್ ನಾಯಕನಟರಾಗಿ ನಟಿಸಿ ಅಭಿಮಾನಿಗಳ ಮನ ಸೂರೆಗೊಂಡಿದ್ದರು.