ಹುಬ್ಬಳ್ಳಿ: ಬಿಜೆಪಿ ಸೇರುವ ಕುರಿತು ನಾನು ಇದುವರೆಗೂ ತೀರ್ಮಾನ ಕೈಗೊಂಡಿಲ್ಲ. ಮೇ ವರೆಗೂ ಯಾವುದೇ ನಿರ್ಧಾರವನ್ನು ಸಹ ಕೈಗೊಳ್ಳುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಎರಡು ಹೆಸರು ಹೈಕಮಾಂಡ್’ಗೆ ಹೋಗಿದ್ದು, ಅದರಲ್ಲಿ ನನ್ನ ಹೆಸರು ಇದ್ದರೂ ಇರಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ, ಅದಕ್ಕೆ ಅಷ್ಟು ಕಾಳಜಿ ವಹಿಸಿ ಮಾಡುತ್ತಾರೆ ಎಂದರು.
ಸಚಿವ ಈಶ್ವರಪ್ಪ ರಾಜೀನಾಮೆ ನೀಡಲ್ಲ ಅಂತಾರೆ, ಕಾಂಗ್ರೆಸ್ ರಾಜೀನಾಮೆ ಪಡೆಯದೇ ಬಿಡಲ್ಲ ಅನ್ನುತ್ತಿದೆ. ಸದನದಲ್ಲಿ ನಡೆಯುತ್ತಿರುವ ಬಿಜೆಪಿ, ಕಾಂಗ್ರೆಸ್ ಗದ್ದಲ, ಗಂಡ-ಹೆಂಡತಿ ನಡುವೆ ಕೂಸು ಬಡವಾದ ಹಾಗಾಗಿದೆ. ರಾಜ್ಯದ ಜನತೆಗೆ ನಾವು ಅನ್ಯಾಯ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಭಾಪತಿಯಾಗಿ ಮಾತನಾಡುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ನಾವು ಜನರಿಗೆ ಮೋಸ, ಅವಮಾನ ಮಾಡುತ್ತಿದ್ದೇವೆ ಎಂದು ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸಹ ಕಾಂಗ್ರೆಸ್ ನವರ ಮನವೊಲಿಸಲು ಯತ್ನಿಸುತ್ತೇನೆ. ಇವರ ಗದ್ದಲದಿಂದ ಬಹಳಷ್ಟು ನೋವಾಗಿದೆ. ಅಧಿವೇಶನದಲ್ಲಿ ಹೀಗೆ ಮಾಡುತ್ತಿರುವುದರಿಂದ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಹಾಳಾಗುತ್ತಿದೆ ಎಂದು ಹೇಳಿದರು.