ಸಹಜ ಸ್ಥಿತಿಗೆ ಬಂದ ಶಿವಮೊಗ್ಗ: ಶಾಲಾ-ಕಾಲೇಜು ಪುನರಾರಂಭ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಒಂದು ವಾರದಿಂದ ಮುಚ್ಚಿದ್ದ ಶಾಲಾ-ಕಾಲೇಜುಗಳು ಸೋಮವಾರ ದಿಂದ ಮತ್ತೆ ಪ್ರಾರಂಭವಾಗಿವೆ.

ನಗರ ಸಹಜ ಸ್ಥಿತಿಗೆ ಬಂದಿದ್ದು,ಎಂದಿನಂತೆ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿವೆ. ಆದರೆ, ನಗರದಲ್ಲಿ ಮಾರ್ಚ್ 4ರವರೆಗೆ ನಿಷೇಧಾಜ್ಞೆ ಮುಂದುವರೆಸಲಾಗಿದೆ ಎಂದು ಜಿಲ್ಲಾಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.

ಬೆಳಗ್ಗೆ 6ಗಂಟೆಯಿಂದ ಸಂಜೆ 7 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ತುರ್ತು ಸೇವೆಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಭಾನುವಾರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯಾಗಿತ್ತು.

ಅವರ ಪಾರ್ಥೀವಶರೀರದ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಉದ್ರಿಕ್ತರು ಅಂಗಡಿ-ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲಾ,ಕಾಲೇಜಿಗೆ ರಜೆ ನೀಡಲಾಗಿತ್ತು.