ಕೋಲಾರ: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಆರು ಮಂದಿ ಡಕಾಯಿತರು ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿ 25 ಲಕ್ಷ ನಗದೂ ಸೇರಿದಂತೆ 45 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ ದೋಚಿರುವ ಘಟನೆ ಕೋಲಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರದ ಸಿ.ಬೈರೇಗೌಡನಗರ(ಬೆಮೆಲ್ ಲೇಔಟ್)ದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಅವರ ಮನೆಯಲ್ಲಿ ಈ ಡಕಾಯಿತಿ ನಡೆದಿದೆ.
ಎರಡು ಅಂತಸ್ತಿನ ಮನೆಯ ಮೊದಲನೆ ಮಹಡಿಯಲ್ಲಿ ಪತ್ನಿ, ಮಗನೊಂದಿಗೆ ರಮೇಶ್ ವಾಸವಾಗಿದ್ದಾರೆ.
ಸೋಮವಾರ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ರಮೇಶ್ ಅವರು ರಾತ್ರಿ 7.30ರಲ್ಲಿ ಮನೆಗೆ ಬಂದಿದ್ದಾರೆ. 8 ಗಂಟೆ ಸುಮಾರಿನಲ್ಲಿ ಇನೋವಾ ಕಾರಿನಲ್ಲಿ ಬಂದ ಆರು ಮಂದಿ ಡಕಾಯಿತರು ರಮೇಶ್ ಅವರ ಮನೆ ಬಾಗಿಲು ತಟ್ಟಿದ್ದಾರೆ.
ಮನೆಯವರು ಯಾರೆಂದು ವಿಚಾರಿಸಿದಾಗ, ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತಪಾಸಣೆಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ರಮೇಶ್ ಅವರ ಪತ್ನಿ ಅನುಮಾನಗೊಂಡು ಬಾಗಿಲು ತೆಗೆಯಬೇಡಿ, ಪೊಲೀಸರಿಗೆ ಮೊದಲು ಮಾಹಿತಿ ನೀಡಿ ಎಂದು ಹೇಳಿದರೂ, ಕೇಳದೆ ರಮೇಶ್ ಅವರು ಬಾಗಿಲು ತೆಗೆದಿದ್ದಾರೆ.
ಏಕಾಏಕಿ ಒಳಗೆ ನುಗ್ಗಿದ ಆರು ಮಂದಿ ಡಕಾಯಿತರು ಬಾಗಿಲು ಚಿಲಕ ಹಾಕಿ ಪಿಸ್ತೂಲು, ಚಾಕು ತೋರಿಸಿ ಕಿರುಚಾಡದಂತೆ ಬೆದರಿಸಿದ್ದಾರೆ.
ಆರೂ ಮಂದಿ ಬಳಿಯೂ ಪಿಸ್ತೂಲ್ ಇರುವುದನ್ನು ಕಂಡು ರಮೇಶ್ ದಂಪತಿ ಮತ್ತು ಮಗ ಗಾಬರಿಗೊಂಡಿದ್ದಾರೆ.
ನಂತರ ಡಕಾಯಿತರು ಮನೆಯನ್ನೆಲ್ಲಾ ಜಾಲಾಡಿ ಬೀರುವಿನಲ್ಲಿದ್ದ 25 ಲಕ್ಷ ಹಣ, ಒಂದು ಕೆಜಿ ಚಿನ್ನಾಭರಣ ದೋಚಿ ತಾವು ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ.
ತಕ್ಷಣ ರಮೇಶ್ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಎಸ್ ಪಿ ದೇವರಾಜ್, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡಕಾಯಿತರ ಪತ್ತೆಗೆ ಬಲೆ ಬೀಸಿದ್ದಾರೆ.