ಚಾಮರಾಜ ನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಗೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿದೆ.
ಶ್ರೀ ಕ್ಷೇತ್ರದಲ್ಲಿ ಭಕ್ತರಿಗೆ ವಾಸ್ತವ್ಯ ಹೂಡಲು ಹಾಗೂ ರಥೋತ್ಸವಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದ ನಾಗ ಮಲೆಭವನದಲ್ಲಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಮಲೆ ಮಹದೇಶ್ವರ ಬೆಟ್ಟದ ಜಾತ್ರಾ ಸಂಬಂಧ ಮುಖ್ಯ ಮಂತ್ರಿಯವರೊಂದಿಗೆ ತಾವು ಮಾತನಾಡಿದ್ದು ಸ್ಥಳೀಯವವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ತಿಳಿಸಿದ್ದರು.
ಅದರಂತೆ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿದೆ ಎಂದು ಹೇಳಿದರು.
ಕೋವಿಡ್ ತಗ್ಗಿರುವ ಕಾರಣ ಹಾಗೂ ಇತರೆ ಭಾಗಗಳಲ್ಲಿಯೂ ಜನರಿಗೆ ಪೂಜಾ ಮಹೋತ್ಸವಗಳಿಗೆ ಅವಕಾಶ ಇರುವುದರಿಂದ ಮಲೆಮಹದೇಶ್ವರ ಬೆಟ್ಟದಲ್ಲಿಯೂ ಶಿವರಾತ್ರಿ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ನಿರ್ಬಂಧ ವಿಧಿಸದೇ ಇರಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂದರ್ಭಕ್ಕಾಗಿ ವಿಧಿಸಲಾಗಿದ್ದ ನಿರ್ಬಂಧ ಹಿಂಪಡೆದಿರುವುದರಿಂದ ಭಕ್ತರು ವಾಸ್ತವ್ಯ ಹೂಡಬಹುದು ಎಂದು ತಿಳಿಸಿದರು.
ಭಕ್ತರು ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ,ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್,ಜಿಲ್ಲಾಧಿಕಾರಿ ಚಾರುಲತಾ ಸೋಮಲ್,ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ,ಜಿಪಂ.ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.