ಚಾಮರಾಜನಗರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಆರ್ಥಿಕ ಸಹಾಯ ಪಡೆದ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನದ ಮಾಸಿಕ ಸಂತೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾಸಿಕ ಸಂತೆಯಲ್ಲಿ ಹಾಕಲಾಗಿದ್ದ ಮಾರಾಟ ಮಳಿಗೆಗಳನ್ನು ಜಿಲ್ಲಾಧಿಕಾರಿಯವರು ಬಹು ಹೊತ್ತು ಆಸಕ್ತಿಯಿಂದ ವೀಕ್ಷಿಸಿದರು.
ಮಹಿಳೆಯರು ತಯಾರಿಸಿದ್ದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಖಾದ್ಯಗಳು, ಅಗರಬತ್ತಿ, ಕೈಚೀಲ, ಫಿನಾಯಿಲ್, ಬಿದಿರು ಬುಟ್ಟಿ, ಕಸೂತಿ ಸೀರೆ ಮತ್ತಿತ್ತರ ವಸ್ತುಗಳನ್ನು ವೀಕ್ಷಿಸಿದರು.
ಮಾರಾಟ ಮಳಿಗೆಯಲ್ಲಿದ್ದ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳೊಂದಿಗೆ ಮಾತನಾಡಿ ತಯಾರಿಕೆ, ಮಾರಾಟದಿಂದ ಬರುವ ಆದಾಯ, ಉತ್ಪನ್ನಗಳಿಗೆ ಮಾಡಲಾಗುವ ವೆಚ್ಚ, ಬಳಸಲಾಗುವ ವಸ್ತುಗಳ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು.
ರೈತ ಸಂಘಟನೆಯವರು ಹಾಕಲಾಗಿದ್ದ ಸಾವಯವ ಹಾಗೂ ವಿಷಮುಕ್ತ ಆಹಾರ ಪದಾರ್ಥಗಳ ಮಳಿಗೆಯಲ್ಲಿ ಬೆಲ್ಲದಪುಡಿ, ಸಿಹಿತಿನಿಸು, ಸಿರಿಧಾನ್ಯಗಳ ಸಿಹಿಉಂಡೆ ಇತರೆ ಪದಾರ್ಥಗಳನ್ನು ಕುತೂಹಲದಿಂದ ವೀಕ್ಷಿಸಿ ರೈತ ಮುಖಂಡರಿಂದ ವಿವರ ಪಡೆದುಕೊಂಡರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಅವರು ಜಿಲ್ಲಾಧಿಕಾರಿಯವರಿಗೆ ಆಹಾರ ಪದಾರ್ಥಗಳ ಕುರಿತು ಮಾಹಿತಿ ನೀಡಿದರು.