ಗುಡ್ಡ ಕುಸಿತ: ಒಂದು ಶವ ಹೊರತೆಗೆದ SDRF,NDRF ತಂಡ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಗುಂಡ್ಲುಪೇಟೆ ಮಡಹಳ್ಳಿ ಗ್ರಾಮದಲ್ಲಿ ಬಿಳಿಕಲ್ಲಿನ ಗಣಿಗಾರಿಕೆಯ ಗುಡ್ಡ ಕುಸಿತದಲ್ಲಿ ಇದುವರೆಗೆ ಒಬ್ಬ ಕಾರ್ಮಿನ ಶವವನ್ನು ಹೊರತೆಗೆಯಲಾಗಿದೆ.

ಗುಡ್ಡ ಕುಸಿತದ ವೇಳೆ ಎಷ್ಟು ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಬಗ್ಗೆ ಕರಾರುವಾಕ್ಕಾದ ಮಾಹಿತಿ ಲಭ್ಯ ವಾಗಿಲ್ಲ.

ಬಹಳಷ್ಟು ಕಾರ್ಮಿಕರು ಸಿಲುಕಿರುವ ಹಿನ್ನೆಲೆಯಲ್ಲಿ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಗಲು ರಾತ್ರಿ  ಕಾರ್ಯಚರಣೆ ಮುಂದುವರೆಸಿದ್ದಾರೆ.

ಗುಂಡ್ಲುಪೇಟೆ ಮಡಹಳ್ಳಿ ಸರ್ವೆ ನಂ192ರಲ್ಲಿ ಬಿಳಿಕಲ್ಲು ಗುಡ್ಡ ಶುಕ್ರವಾರ ಕುಸಿದಿದೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಮಿಕರ ರಕ್ಷಣಾ ಕಾರ್ಯವನ್ನು ಜಿಲ್ಲಾಡಳಿತ  ಚುರುಕುಗೊಳಿಸಿತ್ತು.

ಈಗಾಗಲೆ ಒಂದು ಶವವನ್ನು ಹೊರತೆಗೆಯಲಾಗಿದ್ದು ಐದು ಮಂದಿಯನ್ನು ರಕ್ಷಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಕಲ್ಲುಕ್ವಾರಿ ಮ್ಯಾನೇಜರ್ ನವೀದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಣಿಗಾರಿಕೆ ವೇಳೆ ಕಂಪ್ರೆಸರ್ ಕಾರ್ಮಿಕರು,ಐದು ಟಿಪ್ಪರ್ ಮತ್ತು ನಾಲ್ಕು ಹಿಟಾಚಿ ವಾಹನಗಳಿದ್ದವು ಎಂದು ಗೊತ್ತಾಗಿದೆ.

ಅಕ್ರಮ ಗಣಿಗಾರಿಕೆ ಬಂದ್ ಮಾಡಲು ಸೂಚನೆ: ಗುಡ್ಡ ಕುಸಿತ ಸುದ್ದಿ ತಿಳಿಯುತ್ತಿದ್ದಂತೆ ಉಸ್ತುವಾರಿ ಸಚಿವ ಸೋಮಣ್ಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಜಿಲ್ಲೆಯಲ್ಲಿ ಎಲ್ಲೂ ಕೂಡಾ ಅಕ್ರಮ ಗಣಿಗಾರಿಕೆ ನಡೆಸದಂತೆ ಜಿಲ್ಲಾಡಳಿತಕ್ಕೆ ಸಚಿವ ಸೋಮಣ್ಣ ಸೂಚಿಸಿದರು.

ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ ನಿಗದಿಮಾಡಿದ ಸ್ಥಳದಲ್ಲಿ ಒಂದು ಚೂರು ಒತ್ತುವರಿ ಮಾಡಿದರೂ ಪರವಾನಗಿ ರದ್ದು ಮಾಡಲು ಸೂಚಿಸಲಾಗುವುದು ಎಂದು ಸಚಿವರು ತಿಳಿಸಿದರು.