ಯಾರ ಜತೆಯೂ ಚುನಾವಣೆ ಮೈತ್ರಿ ಇಲ್ಲ -ಹೆಚ್‍ಡಿ ಕುಮಾರಸ್ವಾಮಿ

ಕಲಬುರಗಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ಅವಧಿ ಮುಗಿಯುವ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಇದೆ. ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾದರೂ ಅದನ್ನು ಎದುರಿಸಲು ಜೆಡಿಎಸ್ ಸಿದ್ಧವಾಗಿದೆ ಎಂದರು ಅವರು.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಗಳೊಂದಿಗೆ ಅವರು ಮಾತನಾಡಿದರು.

ಚುನಾವಣೆ ಮೈತ್ರಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು ನಾವು ಯಾರ ಜತೆಯೂ ಇಲ್ಲ. ನಮಗೆ ರೈಟೂ ಬೇಡ, ಲೆಫ್ಟೂ ಬೇಡ. ಸ್ಟ್ರೈಟ್ ಆಗಿ ಹೋಗೋಣ ಎಂಬ ತೀರ್ಮಾನ ಮಾಡಿದ್ದೇವೆ? ಎನ್ನುವ ಮೂಲಕ ಅವರು ಮೈತ್ರಿ ಮಾತಿಗೆ ತೆರೆ ಎಳೆದರು.

ಅವಧಿಗೆ ಮೊದಲೇ ಚುನಾವಣೆ ಬರಬಹುದು ಎನ್ನುವ ಕಾರಣಕ್ಕೇ ನಾವು ಪಕ್ಷ ಸಂಘಟನೆಯಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡಿದ್ದೇವೆ. ಕೋವಿಡ್ ಕಾರಣದಿಂದ ಎರಡು ವರ್ಷ ಸಂಘಟನೆ ಕೆಲಸ ಮಂದಗತಿಯಲ್ಲಿತ್ತು. ಈಗ ಎಲ್ಲವೂ ವೇಗವಾಗಿದೆ. ಸೋಂಕು, ಮತ್ತಿತರೆ ಸಮಸ್ಯೆಗಳು ಇಲ್ಲದಿರುವುದರಿಂದ ಪಕ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಿಜೆಪಿ ಬಗ್ಗೆ ನಿಮಗೆ ಸಾಫ್ಟ್ ಕಾರ್ನರ್ ಇದೆ ನಿಮಗೆ ಎಂದು ಆರೋಪವಿದೆಯಲ್ಲ? ಎನ್ನುವ ಪ್ರಶ್ನೆಗೆ; ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇದೆಯೋ ಇಲ್ಲವೋ ಎಂಬುದಕ್ಕೆ ನನ್ನ ಹೇಳಿಕೆಗಳೇ ಉತ್ತರ ಎನ್ನುವ ಮೂಲಕ ಬಿಜೆಪಿ ಬಗ್ಗೆ ಒಲವಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದರು.

ವಿಧಾನಮಂಡಲ ಬಜೆಟ್ ಅಧಿವೇಶನ ಮುಗಿದ ಕೂಡಲೇ ರಾಜ್ಯ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.