ಕ್ವಾರಿ ಕುಸಿತ:ಮೃತರ ಸಂಖ್ಯೆ ಮೂರಕ್ಕೆ ಏರಿಕೆ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಗುಂಡ್ಲುಪೇಟೆ ಮಡಹಳ್ಳಿ ಕಲ್ಲು ಕ್ವಾರಿ ಕುಸಿತ ಪ್ರಕರಣದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಭಾನುವಾರ ಸಂಜೆ ಒಂದು ಮೃತದೇಹವನ್ನು ಹೊರ ತೆಗೆಯಲಾಗಿದ್ದು ಮೃತನನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ.

ಇದಕ್ಕೂ ಮೊದಲು ಅಜೀಂ ಉಲ್ಲಾ ಅಲಿಯಾಸ್ ಬಬ್ಲು, ಮಿರಾಜ್ ಎಂಬುವವರ ಮೃತದೇಹ ಹೊರ ತೆಗೆಯಲಾಗಿತ್ತು.

ರಕ್ಷಣಾ ಕಾರ್ಯ ಮುಕ್ತಾಯಗೊಳಿಸಲಾಗಿದೆ.25 ಎನ್​ಡಿಆರ್​​ಎಫ್, 25 ಎಸ್​ಡಿಆರ್​​​​​ಎಫ್ ಹಾಗೂ 50 ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬಂಡೆಗಳಡಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಹೊರ ತೆಗೆಯಲು ಶ್ರಮಿಸಿದರು.

ಕ್ವಾರಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ಒಬ್ಬನನ್ನು ಬಂಧಿಸಲಾಗಿದೆ‌‌.

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಮೈಸೂರು ವಿಭಾಗದ ಮುಖ್ಯಾಧಿಕಾರಿ ಜಯರಾಮಯ್ಯ, ಅವರು ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ, ಇದುವರೆಗೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಣ್ಣಿನಲ್ಲಿ ಸಿಲುಕಿರುವ ಟ್ರ್ಯಾಕ್ಟರ್​, ಟಿಪ್ಪರ್​, ಜೆಸಿಬಿಗಳನ್ನು ಹಾಗೆಯೇ ಬಿಡಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.