ಬೆಂಗಳೂರು: ಸಾಯುವುದಾಗಿ ಹೆದರಿಸುತ್ತಿದ್ದ ಮಹಿಳೆಯ ಮೇಲೆ ವ್ಯಕ್ತಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್‍ನಲ್ಲಿದ್ದ ವ್ಯಕ್ತಿ ಆಕೆಯೊಂದಿಗೆ ಜಗಳವಾಡಿದ್ದಾನೆ.
ಈ ಘಟನೆ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಳೇ ಬಯ್ಯಪ್ಪನಹಳ್ಳಿ ನಿವಾಸಿ ಮೀನಾ (23) ತೀವ್ರ ಸುಟ್ಟ ಗಾಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೀನಾ ಮನೆ ಕೆಲಸ ಮಾಡಿಕೊಂಡಿದ್ದಳು. ಈಕೆಯ ಮಕ್ಕಳು ಬೇರೆಕಡೆ ವಾಸವಾಗಿದ್ದಾರೆ.
ಮೀನಾ ಜೊತೆ ಕೊರಿಯರ್ ವೃತ್ತಿ ಮಾಡುತ್ತಿರುವ ಬಾಬು ಎಂಬಾತ ಲಿವಿಂಗ್ ಟುಗೆದರ್‍ನಲ್ಲಿದ್ದ. ಬಾಬು ಕುಡಿತದ ಚಟ ಹೊಂದಿದ್ದು, ಪ್ರತಿನಿತ್ಯ ಹಣಕ್ಕಾಗಿ ಆಕೆಯನ್ನು ಪೀಡಿಸುತ್ತಿದ್ದ.
ಇದರಿಂದ ಬೇಸತ್ತು ಮೀನಾ ಡಿಸೇಲ್‍ನ್ನು ಸುರಿದುಕೊಂಡು ಸಾಯುವುದಾಗಿ ಹೆದರಿಸಿದ್ದಾಳೆ.
ಇದಕ್ಕೆ ಬೆದರದೆ ನೀನೇನು ಸಾಯುವುದು ನಾನೇ ಸಾಯಿಸುತ್ತೇನೆ ಎಂದು ಆರೋಪಿ ಬಾಬು ಆಕೆಯ ಕೈನಿಂದ ಡಿಸೇಲ್ ಕಿತ್ತುಕೊಂಡು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.
ಮೀನಾ ಸಹಾಯಕ್ಕಾಗಿ ಕೋಗಿಕೊಂಡಾಗ ನೆರೆಹೊರೆಯವರು ಇವರ ಮನೆ ಬಳಿ ಬರುತ್ತಿದ್ದಂತೆ ಆರೋಪಿ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ಆಯತಪ್ಪಿ ಬಿದ್ದು ಕಾಲು ಮುರಿದುಕೊಂಡಿದ್ದಾನೆ.
ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿ, ಬೆಂಕಿಯನ್ನು ನಂದಿಸಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಸುಟ್ಟಗಾಯಗಳಿಂದ ನರಳಾಡುತ್ತಿದ್ದ ಮೀನಾ ಹಾಗೂ ಕಾಲು ಮುರಿದುಕೊಂಡಿರುವ ಆರೋಪಿ ಬಾಬುನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.