ಮಂಡ್ಯ: ರಾಜ್ಯ ಸರ್ಕಾರದ ತೀರ್ಮಾನದಂತೆ ಈ ಬಾರಿಯ ಐತಿಹಾಸಿಕ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 18ರಂದು ನಡೆಯುವ ತೆಪ್ಪೋತ್ಸವ ಕಾರ್ಯಕ್ರಮವನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಮೇಲುಕೋಟೆ ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ದತೆ ಕುರಿತು
ಮಾಹಿತಿ ನೀಡಿದ ಅವರು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡು ಉತ್ಸವಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 14 ರಂದು ನಡೆಯುವ ವೈರಮುಡಿ ಬ್ರಹೋತ್ಸವಕ್ಕೆ ಆಗಮಿಸಿ ದಳವಾಯಿ ಕೆರೆಯಲ್ಲಿ ಬಾಗಿನ ಅರ್ಪಿಸಿ ನಂತರ ದೇವರ ದರ್ಶನ ಮಾಡಿ ಪುಷ್ಪಾರ್ಚನೆ ಮಾಡುವರು ನಂತರ ಮೇಲುಕೋಟೆಯಲ್ಲಿನ ಕೆಲವು ಸರ್ಕಾರಿ ಕಾಮಗಾರಿಗೆ ಶಂಕು ಸ್ಥಾಪನೆ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸುವರು ಎಂದು ಹೇಳಿದರು.
ಮಹೋತ್ಸವ ದಿನದಂದು ಸುಮಾರು 10 ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾದಿಗಳಿಗೆ ಕುಂದುಕೊರತೆಯಾಗದಂತೆ ಎಲ್ಲರಿಗೂ ದೇವರ ದರ್ಶನ ಮಾಡಲು ಅನುವು ಮಾಡಿಕೊಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಂಡುಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್, ಮೇಲುಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.