ಪೇಟಿಯಂ ಸಂಸ್ಥಾಪಕರ ಬಂಧನ: ಜಾಮೀನಿನ ಮೇಲೆ ಬಿಡುಗಡೆ

ನವದೆಹಲಿ: ಪೇಟಿಯಂ ಸಂಸ್ಥಾಪಕ  ವಿಜಯ ಶೇಖರ್ ಶರ್ಮ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವಿಜಯ ಶರ್ಮ ಅವರು ಕಳೆದ ಫೆ.22ರಂದು ದೆಹಲಿಯ ಅರಬಿಂದೋ ಮಾರ್ಗದಲ್ಲಿ ಮದರ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಮುಂಭಾಗ ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಬೆನಿಟಾ ಮೇರಿ ಜೈಕರ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರು ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಮಾಳ್ವಿಯ ನಗರ ಪೊಲೀಸ್ ಠಾಣೆಯಲ್ಲಿ ಅತಿವೇಗ ಹಾಗೂ ಅಜಾಗರೂಕ ಚಾಲನೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಫೆ.22ರಂದು ತಾವು ಬೆಳಗ್ಗೆ 8 ಗಂಟೆಗೆ ಡಿಸಿಪಿ ಅವರ ಕಾರನ್ನು ಚಾಲನೆ ಮಾಡಿಕೊಂಡು ಪೆಟ್ರೋಲ್ ಬಂಕ್ ಬಳಸಿ ಹೋಗುವಾಗ ಮದರ್ಸ್ ಇಂಟರ್‍ನ್ಯಾಷನಲ್ ಸ್ಕೂಲ್ ಬಳಿ ಸಂಚಾರ ದಟ್ಟಣೆ ಇದ್ದು ತಮ್ಮ ಜೊತೆಗಿದ್ದ ಕಾನ್‍ಸ್ಟೇಬಲ್ ಪ್ರದೀಪ್ ಅವರಿಗೆ ಕಾರಿನಿಂದ ಇಳಿದು ಸಂಚಾರವನ್ನು ನಿರ್ವಹಿಸುವಂತೆ ಸಲಹೆ ನೀಡಿದ್ದು, ಅದರ ಪ್ರಕಾರ ಅವರು ಕೆಳಗೆ ಇಳಿದರು.

ಸಂಚಾರ ಕಡಿಮೆಯಾಗುವ ಹಂತದಲ್ಲಿ ವೇಗವಾಗಿ ಬಂದ ಜಾಗ್ವರ್ ರೇಂಜ್‍ರೋವರ್ ಕಾರು ಡಿಸಿಪಿ ಅವರ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು ಎಂದು ಕಾರಿನ ಚಾಲಕ ದೀಪಕ್‍ಕುಮಾರ್ ತಿಳಿಸಿದ್ದಾರೆ.

ಆ ಕಾರಿನ ಸಂಖ್ಯೆಯನ್ನು ನಾವು ಬರೆದುಕೊಂಡು ಮಾಳವೀಯ ನಗರ ಪೊಲೀಸರಿಗೆ ದೂರು ನೀಡಿದ್ದೆವು.

ಕಾರಿನ ಮಾಲೀಕರನ್ನು ಪತ್ತೆಹಚ್ಚಿದಾಗ ಅದು ಹರಿಯಾಣದಲ್ಲಿ ನೊಂದಣಿಯಾಗಿದ್ದು, ಮಾಲೀಕರನ್ನು ವಿಜಯ ಶರ್ಮ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ವಿಜಯ ಶರ್ಮ ಅವರಿಗೆ ಕರೆ ಮಾಡಿ ಕರೆಸಿಕೊಂಡು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.