(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ರಸ್ತೆ ಅಪಘಾತವಾದ ಸಂದರ್ಭದಲ್ಲಿ ತುರ್ತು ಸೇವೆ ಅಂದರೆ ನೆನಪಾಗೋದೇ ಈ 108 ಆಂಬುಲೆನ್ಸ್.
ಆದರೆ ಈ 108 ರ ರಕ್ಷಾ ಕವಚದ ಚಾಲಕರು ಸೇರಿದಂತೆ ಇತರ ಸಿಬ್ಬಂದಿಗಳಿಗೆ ಕಳೆದ 4 ತಿಂಗಳಿಂದ ಸರ್ಕಾರ ಸಂಬಳ ನೀಡಿಲ್ಲ. ಹಾಗಾಗಿ ಇವರ ಬದುಕು ಚಿಂತಾಜನಕವಾಗಿದೆ.
ಅಪಘಾತವಾದಾಗ, ಗ್ರಾಮೀಣ ಭಾಗದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಸ್ಥಳೀಯರು ತಕ್ಷಣವೇ ಕರೆ ಮಾಡುವುದು 108ಕ್ಕೆ.
ತಕ್ಷಣವೇ ಧಾವಿಸಿ ಜೀವ ರಕ್ಷಿಸುವ ಕೆಲಸ ಮಾಡುವ ಜೀವ ರಕ್ಷಕರ ಜೀವನ ನಾಲ್ಕೈದು ತಿಂಗಳಿನಿಂದ ವೇತನ ಇಲ್ಲದೆ ಅಯೋಮಯವಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಜಿಲ್ಲಾ ಘಟಕ ದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕೂಡಲೇ ವೇತನ ಪಾವತಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆರೋಗ್ಯ ಇಲಾಖೆಯ 108 ವಾಹನ ದಲ್ಲಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕಳೆದ ನವೆಂಬರ್ ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ಇದರಿಂದ ಚಾಲಕರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದು, ತಮ್ಮ ದೈನಂದಿನ ಚಟುವಟಿಕೆಗೂ ಸಾಲದ ಮೊರೆ ಹೋಗಬೇಕಾಗಿದೆ.
108 ವಾಹನದ ಚಾಲಕರು ಹಾಗೂ ಸಿಬ್ಬಂದಿ ಅನೇಕ ಕುಂದುಕೊರತೆ ಎದುರಿಸುತ್ತಿದ್ದು ಈ ಹಿಂದೆ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಡೆಸಿದ ಮುಷ್ಕರ ಸಮಯದಲ್ಲಿ 674 ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.
ಇವರನ್ನು ಮರುನೇಮಕ ಮಾಡಿಕೊಳ್ಳಬೇಕು. ವೇತನದಲ್ಲಿರುವ ತಾರತಮ್ಯವನ್ನು ಹೋಗಲಾಡಿಸಬೇಕು. ಎರಡು ವರ್ಷದ ಹೆಚ್ಚುವರಿ ವೇತನವನ್ನು (ಅರಿಯರ್) ನೀಡಬೇಕು. ಎಲ್ಲಾ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸ ಬೇಕು. ಆಂಬುಲೆನ್ಸ್‌ಗಳನ್ನು ರಿಪೇರಿ ಮಾಡಿಸಿ, ಅಗತ್ಯ ಇರುವ ಮೆಡಿಕಲ್ ಸಾಮಗ್ರಿಗಳನ್ನು ಸಮಯಕ್ಕೆ ತಕ್ಕಂತೆ ನೀಡುವಂತೆ ನೌಕರರು ಒತ್ತಾಯಿಸಿದ್ದಾರೆ.
108ರ ವಾಹನ ಚಾಲಕರು ಹಾಗೂ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿ ವೇತನ ನೀಡಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಚಾಲಕರು ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇನ್ನೆರಡು ಮೂರು ದಿನ ಗಳಲ್ಲಿ ವೇತನ ಪಾವತಿಸಲಾಗುವುದು ಎಂದು ಚಾಮರಾಜನಗರ ಆರೋಗ್ಯ&ಕುಟುಂಬ ಕಲ್ಯಾಣಾದಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.