ವಿಜೃಂಭಣೆಯಿಂದ ನೆರವೇರಿದ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

ಮಂಡ್ಯ: ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ದೇವಾಲಯಕ್ಕಷ್ಟೇ ಸೀಮಿತವಾಗಿದ್ದ ನಾಗಮಂಗಲ ತಾಲ್ಲೂಕಿನ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಮುತ್ತಿನ ಪಲ್ಲಕ್ಕಿ ಉತ್ಸವ ಈ ಬಾರಿ  ಆದಿಚುಂಚನಗಿರಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಗುರುವಾರ ಸಂಜೆ ಧಾರ್ಮಿಕ ಸಮ್ಮೇಳನದ ನಂತರ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಜರುಗಿತು.

ಇದನ್ನು ಅಪಾರ ಭಕ್ತರು ಕಣ್ತುಂಬಿಕೊಂಡರು. ಬಣ್ಣ ಬಣ್ಣದ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದರೆ, ಸಂಗೀತ ಕಾರಂಜಿ ಗಮನ ಸೆಳೆಯಿತು.

ವಿದ್ಯುತ್ ದೀಪಾಲಂಕಾರಗಳಿಂದ ಆದಿಚುಂಚನಗಿರಿ ಮಠ ಕಂಗೊಳಿಸುತ್ತಿತ್ತು.

ಶುಕ್ರವಾರ ಮುಂಜಾನೆ ೫ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಧರೇಶ್ವರಸ್ವಾಮಿಯ ಅಲಂಕೃತ ರಥವನ್ನು ಭಕ್ತರು ಎಳೆದರು.

ಜನರು ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು.

ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸರ್ವಾಂಲಕೃತ ಅಡ್ಡ ಪಲ್ಲಕ್ಕಿ ಉತ್ಸವ ನೆರವೇರಿತು.

ಜಾನಪದ ಕಲಾ ತಂಡಗಳ ನೃತ್ಯ, ನಾಟಕ ಪ್ರದರ್ಶನಗಳು ಗಮನ ಸೆಳೆದವು.