ಹೈದರಾಬಾದ್: ಟಿಂಬರ್ ಡಿಪೋದಲ್ಲಿ ಬೆಂಕಿ ಅವಘಡ ಸಂಭವಿಸಿ 11 ಮಂದಿ ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಸಿಕಂದರಬಾದ್‍ನ ಬೋಯಗುಡದಲ್ಲಿ ನಡೆದಿದೆ.
ಮೃತರು ಬಿಹಾರ ಮೂಲದ ಕಾರ್ಮಿಕರು ಎಂದು ತಿಳಿದುಬಂದಿದೆ.
ಬೆಂಕಿ ಅವಘಡ ಸಂಭವಿಸಿದಾಗ 15ಕ್ಕೂ ಹೆಚ್ಚು ಮಂದಿ ಟಿಂಬರ್ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 11 ಮಂದಿ ಮೃತಪಟ್ಟಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ರಕ್ಷಿಸಲಾಗಿದೆ.
ಬುಧವಾರ ಮುಂಜಾನೆ 3.30ರ ಸುಮಾರಿಗೆ ಆಕಸ್ಮಿಕವಾಗಿ ಡಿಪೋದಲ್ಲಿ ಬೆಂಕಿ ಹತ್ತಿಕೊಂಡಿದೆ, ಭಾರೀ ಪ್ರಮಾಣದಲ್ಲಿ ಬೆಂಕಿ ಹೊಗೆ ಬರುತ್ತಿದ್ದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ 11 ಮಂದಿ ಬೆಂಕಿಗೆ ಆಹುತಿಯಾಗಿದ್ದರು.