ಸಿಇಒ ಗಿರೀಶ್ ಎಸಿಬಿ ಬಲೆಗೆ

ಮೈಸೂರು: ಟೆಂಡರ್ ಪಾಸ್ ಮಾಡಲು ಗುತ್ತಿಗೆದಾರನಿಂದ ಲಕ್ಷ ರೂ ಲಂಚ ಪಡೆದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ತೋಟಗಾರಿಕೆ ಹಾಗೂ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿತ್ತು.

ಅದರಲ್ಲಿ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಆರ್ ಸಿ ಬಿಸಿನೆಸ್ ಸಲ್ಯೂಷನ್ ಸಂಸ್ಥೆ ಮಾಲೀಕ ಚರಣ್ ಅವರು ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ 7 ದಿನಗಳಲ್ಲಿ ಟೆಂಡರ್ ಪಾಸ್ ಮಾಡುವ ನಿಯಮವಿದ್ದರೂ 20ದಿನ ಕಳೆದರೂ ಗಿರೀಶ್ ಟೆಂಡರ್ ಪಾಸ್ ಮಾಡಿರಲಿಲ್ಲ.

ಟೆಂಡರ್ ಪಾಸ್ ಮಾಡಲು ಒಂದು ಲಕ್ಷರೂ. ನೀಡುವಂತೆ ಅವರು ಬೇಡಿಕೆ ಇಟ್ಟಿದ್ದರು.ಹಾಗಾಗಿ ಎಸಿಬಿಗೆ ಚರಣ್ ದೂರು ನೀಡಿದ್ದರು.

ತಮ್ಮ ಕಛೇರಿಯಲ್ಲಿ ಗಿರೀಶ್ ಲಂಚ ಸ್ವೀಕರಿಸುವ ವೇಳೆಯೇ ರೆಡ್ ಹ್ಯಾಂಡ್‌ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿದ್ದಾರೆ. ಅವರನ್ನು ಬಂಧಿಸಿರುವ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.