ತಿರುಪತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ತಡರಾತ್ರಿ ಕಣಿವೆಗೆ ಬಸ್ ಉರುಳಿಬಿದ್ದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಖಾಸಗಿ ಬಸ್‍ನಲ್ಲಿ ಅನಂತಪುರ ಜಿಲ್ಲೆಯಿಂದ ಸುಮಾರು 48 ಜನರು ವಿವಾಹ ನಿಶ್ಚಿತಾರ್ಥ ಸಂಭಂದ ತಿರುಪತಿ ಕಡೆಗೆ ತೆರಳುತ್ತಿದ್ದಾಗ ಭಾಕರಪೇಟೆ ಬಳಿಯ ಘಾಟ್ ರಸ್ತೆಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆಗೆ ಉರುಳಿದೆ.
ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್. ವಿ. ಅಪ್ಪಲ ನಾಯ್ಡು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹಗ್ಗ ಬಳಸಿ ಮೇಲಕ್ಕೆತ್ತಿ ತಿರುಪತಿಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತರ ಕುಟುಂಬಕ್ಕೆ ಆಂಧ್ರ ಪ್ರದೇಶ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.