ಚಾಮರಾಜನಗರ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಅತಂಕವಿಲ್ಲದೇ ಧೈರ್ಯದಿಂದ ಎದುರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಏಪ್ರಿಲ್ 1ರಂದು ನಡೆಸಿಕೊಡಲಿರುವ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಶ್ರೇಯಾ ಆಯ್ಕೆಯಾಗಿದ್ದಾರೆ.
ಶ್ರೇಯಾ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏಪ್ರಿಲ್ 1 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ತಾಳ್ಕಟೋರಾ ಕ್ರೀಡಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದಕ್ಕೆ ದೇಶಾದ್ಯಂತ 15.7 ಲಕ್ಷ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೇ ಆಕಾಶವಾಣಿ, ಯೂಟ್ಯೂಬ್, ಪಿಎಂಒ ಇಂಡಿಯಾ, ರಾಜ್ಯಸಭಾ ಟಿವಿ, ಸ್ವಯಂಪ್ರಭಾ ಟಿವಿ ಸೇರಿದಂತೆ ಇತರೆ ಮಾಧ್ಯಮಗಳ ಮೂಲಕ ಪ್ರಸಾರವಾಗಲಿದೆ ಎಂದು ತಿಳಿಸಿದರು.
ಶ್ರೇಯಾ ಚಾಮರಾಜನಗರ ಪಟ್ಟಣದ ನಿವಾಸಿಯಾಗಿದ್ದು, ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಸುಂದರ ಹಾಗೂ ಸೃಜನಾತ್ಮಕ ಬರವಣಿಗೆ (ಕ್ರಿಯೇಟಿವ್ ರೈಟಿಂಗ್) ಸ್ಪರ್ಧೆಯಲ್ಲಿ ಶ್ರೇಯಾ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಡಿಜಿಟಲ್ ಇಂಟರ್ಯಾಕ್ಷನ್ ಇನ್ ಕ್ಲಾಸ್ ರೂಂ ಸಂಬಂಧ ಸಂವಾದದಲ್ಲಿ ಶ್ರೇಯಾ ಪ್ರಧಾನಮಂತ್ರಿಯವರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದರು.
ಭಯ, ನ್ಯೂನತೆಯನ್ನು ದೂರ ಮಾಡಲು ಹಾಗೂ ಮಕ್ಕಳಿಗೆ ಪರೀಕ್ಷೆ ಸಂಬಂಧ ಉಂಟಾಗುವ ಒತ್ತಡವನ್ನು ನಿವಾರಿಸಲು ಸಂವಾದ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಎಸ್. ಕಾತ್ಯಾಯಿನಿದೇವಿ ತಿಳಿಸಿದರು.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ನಿರ್ಮಲಾಕುಮಾರಿ ಮಾತನಾಡಿ ಕೋವಿಡ್‍ನಿಂದಾಗಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳು ಪಾಠ ಪ್ರವಚನ, ಪರೀಕ್ಷೆಗಳನ್ನು ಎದುರಿಸಿ ಈಗ ಆಫ್‍ಲೈನ್ ಪರೀಕ್ಷೆಗಳಿಗಾಗಿ ತಯಾರಿಯಲ್ಲಿದ್ದಾರೆ ಎಂದು ಹೇಳಿದರು.
ಹಾಗಾಗಿ ಪರೀಕ್ಷಾ ಪೇ ಚರ್ಚಾ ಪ್ರಧಾನಮಂತ್ರಿ ಮೋದಿಯವರ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗಲಿದೆ ಎಂದು ತಿಳಿಸಿದರು.
ಸೃಜನಾತ್ಮಕ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರಧಾನ ಮಂತ್ರಿಗಳ ವಿಶೇಷ ಪ್ರಶಸ್ತಿ ಪತ್ರ ಹಾಗೂ ಪರೀಕ್ಷಾ ಪೇ ಚರ್ಚಾ ಕಿಟ್ ಸಿಗುತ್ತದೆ ಎಂದು ತಿಳಿಸಿದರು.
ಹೊಂಡರಬಾಳು ನವೋದಯ ಶಾಲೆಯ ಹಿರಿಯ ಕುರಿಯನ್ ಥಾಮಸ್, ವೈ.ಕೆ. ಬೈಯುಪ್ಪುರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.