ಹಲಾಲ್, ಜಟ್ಕಾ ವಿಚಾರ ಧಾರ್ಮಿಕತೆ ಮತ್ತು ಭಾವನೆಯ ತಾಕಲಾಟ -ಆರಗ ಜ್ಞಾನೇಂದ್ರ

ಕೊಪ್ಪಳ: ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಹಲಾಲ್, ಜಟ್ಕಾ ವಿಚಾರ ಕಾನೂನು ಸುವ್ಯವಸ್ಥೆ ಸಮಸ್ಯೆ ಅಲ್ಲ ಎಂದು ಸಮರ್ಥಿಸಿಕೊಂಡ ಗೃಹ ಸಚಿವ ಅರಗ ಜ್ಞಾನೇಂದ್ರ ಇದು ಧಾರ್ಮಿಕತೆ ಮತ್ತು ಭಾವನೆಯ ತಾಕಲಾಟವಾಗಿದೆ. ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಹಲಾಲ್-ಜಟ್ಕಾ ಯಾವುದು ಕಾನೂನು ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ತುಂಬಾ ಜನ ಬುದ್ದಿವಂತರು ಉಪದೇಶ ಹೇಳುವವರಿದ್ದಾರೆ. ಒಬ್ಬರಿಗೆ ಕಮ್ಯೂನಲ್ ಆಗಿ ಇರುವಂತೆ ಹೇಳುತ್ತಾರೆ. ಮತ್ತೊಬ್ಬರು ಸೆಕ್ಯೂಲರ್ ಆಗಿ ಬದುಕಬೇಕು ಎನ್ನುತ್ತಾರೆ. ಸೆಕ್ಯೂಲರಿಸಂ ಎನ್ನುವುದು ನಮ್ಮ ರಕ್ತದಲ್ಲೇ ಬಂದಿದೆ ಎಂದು ಹೇಳಿದರು.

ಈ ದೇಶದ ಕಾನೂನು ಗೌರವಿಸದವರಿಗೆ ಬುದ್ಧಿಜೀವಿಗಳು ಮೊದಲು ಪಾಠ ಹೇಳಲಿ. ನೆಲದ ಕಾನೂನಿಗೆ ಗೌರವ ಕೊಡಲು ಮೊದಲು ಕಲಿಯಲಿ ಎಂದು ಸಲಹೆ ನೀಡಿದರು.

ಈ ದೇಶದಲ್ಲಿ ಯಾರನ್ನು ಯಾರೂ ವಿರೋಧಿಸಿಲ್ಲ ರಾಜಕಾರಣಿಗಳಂತೂ ವೋಟ್ ಬ್ಯಾಂಕಿಗಾಗಿ ಓಲೈಕೆ ಮಾಡುತ್ತಾರೆ. ಉಳಿದವರಿಗೆ ಸತ್ಯ ಹೇಳಲು ಏನು ಸಮಸ್ಯೆ. ಅವರಿಗೆ ಏನು ತೆವಲು ಎಂದು ಪ್ರಶ್ನಿಸಿದರು.

ಯಾವಾಗ ಮೌನವಾಗಿರಬೇಕು, ಯಾವಾಗ ಬಾಯಿ ಬಿಡಬೇಕು ಎಂಬುದಕ್ಕೆ ಮಾತ್ರ ವಿಚಾರವಂತರು ಸೀಮಿತರಾಗಿದ್ದಾರೆ ಎಂದು ಕಿಡಿಕಾರಿದ ಅವರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ 60 ಜನ ಬುದ್ದಿಜೀವಿಗಳು ಯಾರೂ ಬುದ್ದಿಜೀವಿಗಳೇ ಅಲ್ಲ ಎಂದರು.

ಮೇಲು ಕೀಳು ಎಂಬುದನ್ನು ತೊಡೆಯುವುದಕ್ಕೆ ಸಮವಸ್ತ್ರ ಜಾರಿಗೊಳಿಸಲಾಗಿದೆ. ಈ ಬುದ್ಧಿವಂತರು ಹಿಜಾಬ್ ವಿಚಾರದಲ್ಲಿ ಏನು ಹೇಳಿದರು ಎಂದು ತಿರುಗೇಟು ನೀಡಿದರು.

ನಾನು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದಿಲ್ಲ. ಅವರು ರಾಜಕಾರಣಿ, ಅವರನ್ನು ಜನ ತಿರಸ್ಕಾರ ಮಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಇಲ್ಲ. ಅದರ ಇಬ್ಬಗೆ ನೀತಿಯಿಂದ ಅದು ನಾಶವಾಗುತ್ತದೆ ಎಂದು ಹೇಳಿದರು.

ಈ ವರ್ಷ 2220 ಕೆಎಸ್‍ಆರ್‍ಪಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪೊಲೀಸರಿಗಾಗಿ 20 ಸಾವಿರ ಮನೆಗಳನ್ನು ಕಟ್ಟುತ್ತಿದ್ದೇವೆ.

ಒಂದೇ ವರ್ಷದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸರ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.