ಬೆಂಗಳೂರು: ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕಾನೂನಿಗೆ ವಿರೋಧವಾಗಿ ತಮ್ಮ ಮನಸ್ಸಿಗೆ ಬಂದಂತೆ ಬಜೆಟ್ ಮಂಡನೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯಲು ಅದಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
1949ರಲ್ಲಿ ಮೇಯರ್ ಗಿರಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಪಾಲಿಕೆ ಕಟ್ಟಡ ಹೊರತುಪಡಿಸಿ ಬೇರೆ ಕಡೆ ಬಜೆಟ್ ಮಂಡನೆ ಮಾಡಿರುವ ಇತಿಹಾಸವಿಲ್ಲ.
ಅದರಲ್ಲೂ ಮೇಯರ್, ಉಪಮೇಯರ್, ಆಯುಕ್ತರ ಹಾಜರಾತಿಯಲ್ಲೇ ಬಜೆಟ್ ಮಂಡನೆ ಮಾಡಬೇಕು.
ಒಂದು ವೇಳೆ ಜನಪ್ರತಿನಿಧಿಗಳು ಇಲ್ಲದಿದ್ದರೆ ಅಡಳಿತಾಧಿಕಾರಿಗಳ ಸಮ್ಮುಖದಲ್ಲಿ ಬಜೆಟ್ ಮಂಡನೆ ಮಾಡುವುದು ವಾಡಿಕೆ.
ಆದರೆ, ಈ ಬಾರಿ ಬಿಬಿಎಂಪಿ ಕಟ್ಟಡಕ್ಕೆ ಬದಲಾಗಿ ರಾತ್ರೋರಾತ್ರಿ ನಗರಾಭಿವೃದ್ಧಿ ಇಲಾಖೆಯ ರೂಮ್ ನಂಬರ್ 436ರಲ್ಲಿ ಬಜೆಟ್ ಮಂಡನೆ ಮಾಡಿ ತಕ್ಷಣ ಅನುಮೋದನೆ ಪಡೆದುಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅದರಲ್ಲೂ ಬಿಬಿಎಂಪಿ ಮುಖ್ಯ ಅಯುಕ್ತರ ಅನುಪಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡಿ ಅಪ್ರೂವಲ್ ಪಡೆದುಕೊಂಡಿರುವುದರ ಹಿಂದೆ ನಗರದ ಪ್ರಭಾವಿ ಸಚಿವರುಗಳ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಇನ್ನು ಬಜೆಟ್‍ನಲ್ಲಿ ಆರ್ಥಿಕ ಶಿಸ್ತು ಜರಿಗೆ ತರುವ ಉದ್ದೇಶದಿಂದ ತಂದಿದ್ದ ವಿತ್ತಿಯ ನಿರ್ವಹಣೆ ಕಾಯ್ದೆಯನ್ನು ಈ ಬಾರಿ ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.
ಆರ್ಥಿಕ ಶಿಸ್ತು ನಿಯಮದಡಿ ಬಜೆಟ್ ಮಂಡಿಸಿದ್ದರೆ ಬಜೆಟ್ ಗಾತ್ರ 9 ಸಾವಿರ ಕೋಟಿ ಗಡಿ ದಾಟುವಂತಿರಲಿಲ್ಲ. ಆದರೆ ಈ ನಿಯಮವನ್ನು ಕಡೆಗಣಿಸಿ ರಾತೋ ರಾತ್ರಿ10480 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ.