ಸೇವೆಯಿಂದ ಪುಣ್ಯಕ್ಷೇತ್ರ ಮಾಡಿದ ಸಿದ್ದಗಂಗಾ ಶ್ರೀಗಳು -ಅಮಿತ್ ಷಾ

ತುಮಕೂರು: ಸಿದ್ಧಗಂಗಾ ಮಠಕ್ಕೆ  ಬಂದಾಗಲೆಲ್ಲ ಉತ್ಸಾಹ ಹೆಚ್ಚಿಸಿಕೊಂಡು ಹೋಗುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಹುಟ್ಟುಹಬ್ಬದ ಪ್ರಯುಕ್ತ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶ ಸಂಸ್ಕೃತಿಯ ತವರೂರು, ಜ್ಯೋತಿರ್ಲಿಂಗಗಳು, ಪುರಾಣಗಳು ಇವೆ, ಪುಣ್ಯ ಸ್ಥಳಗಳು ಇವೆ ಆದರೆ ಶಿವಕುಮಾರ ಸ್ವಾಮೀಗಳು ತಮ್ಮ ಸೇವೆಯಿಂದ ಪುಣ್ಯಕ್ಷೇತ್ರವನ್ನು ಮಾಡಿದರು ಎಂದು ಹೇಳಿದರು.

ಅಟಲ್ ಜೀ ಇಲ್ಲಿಗೆ ಬಂದಾಗ ಉತ್ತರದಲ್ಲಿ ಗಂಗಾ ದಕ್ಷಿಣದಲ್ಲಿ ಸಿದ್ಧಗಂಗಾ ಎಂದಿದ್ದರು, ಗಂಗಾದಲ್ಲಿ ಮುಳುಗಿದರೆ ಪಾಪ ಹೋಗುತ್ತದೆ, ಸಿದ್ಧಗಂಗೆಗೆ ಬಂದರೆ ಜನ್ಮಜನ್ಮಾಂತರದ ಪುಣ್ಯ ಜಾಗೃತವಾಗುತ್ತದೆ ಅದಕ್ಕಾಗಿಯೇ ಅಟಲ್ ಜೀ ಸಿದ್ಧಗಂಗೆ ಪ್ರಾಶಸ್ತ್ಯ ನೀಡಿದ್ದರು, ಇಲ್ಲಿ ಅಂತಹ ಶಕ್ತಿ ಇದೆ, ಶಿವಕುಮಾರ ಸ್ವಾಮೀಜಿ ಅವರ ಕರ್ಮಸ್ಥಳ ಇದು ಎಂದು ಬಣ್ಣಿಸಿದರು.

ಕೋವಿಡ್ ಸಮಯದಲ್ಲಿ ದೇಶದ 80 ಕೋಟಿ ಜನರಿಗೆ ಆಹಾರ ಭದ್ರತೆ, ನೂತನ ಶಿಕ್ಷಣದ ನೀತಿ ಮೂಲಕ ಮಾತೃಭಾಷೆಯಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ದೊರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ, ಮೂರು ಕೋಟಿ ಬಡವರಿಗೆ ಮನೆ ನಿರ್ಮಾಣ ಮಾಡಲಾಗಿದೆ, ಶ್ರೀಗಳ ಮೂರು ತತ್ವಗಳನ್ನು ಮೋದಿ ಸರ್ಕಾರ ಅಳವಡಿಸಿಕೊಂಡಿದೆ ಎಂದು ಹೇಳಿದರು.

ಡಾ.ಶಿವಕುಮಾರಸ್ವಾಮೀಜಿಗಳ ಚೈತನ್ಯದ ಆತ್ಮ ಎಲ್ಲಿರುತ್ತದೆ ಅಲ್ಲಿ ಅಭಿವೃದ್ಧಿಯಾಗುತ್ತದೆ, 80 ವರ್ಷಗಳ ಕಾಲ ಮಠಾಧೀಶರಾಗಿ ಸಮಾಜಕ್ಕೆ ನೀಡಿರುವ ತತ್ವಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅಮಿತ್ ಷಾ ಕರೆ ನೀಡಿದರು.