ಬೆಂಗಳೂರು: ರೈಲ್ವೆ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ರಾವ್ ಅವರು ಐಪಿಎಸ್ ವೃತ್ತಿಗೆ ನಿವೃತ್ತಿ ಘೋಷಿಸಿ ಇದೀಗ ರಾಜಕೀಯದತ್ತ ಮುಖ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (AAP) ಸೇರಲು ಭಾಸ್ಕರ್ ರಾವ್ ಅವರು ಸಜ್ಜಾಗಿದ್ದಾರೆ.
ನವದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ ಪಕ್ಷದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಅವರು ಪಕ್ಷ ಸೇರಲಿದ್ದಾರೆ.
ದೆಹಲಿಗೆ ತೆರಳಿದ ಭಾಸ್ಕರ ರಾವ್, ಸೋಮವಾರ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಆಪ್ ಸೇರ್ಪಡೆ ವಿಚಾರ, ಕರ್ನಾಟಕದ ಪ್ರಸ್ತುತ ರಾಜಕಾರಣದ ಬಗ್ಗೆ ಕೇಜ್ರಿವಾಲ್ ಜೊತೆ ಭಾಸ್ಕರ್ ರಾವ್ ಸಮಾಲೋಚನೆ ನಡೆಸಲಿದ್ದಾರೆ.
ಅರವಿಂದ ಕೇಜ್ರಿವಾಲ್ ಮೀಟ್ ಮಾಡಲು ಸೋಮವಾರ ಬೆಳಗ್ಗೆ ಸಮಯ ಕೂಡ ನಿಗದಿಯಾಗಿದ್ದು, ಕೇಜ್ರಿವಾಲ್ ಹಾಗೂ ಭಾಸ್ಕರ್ ರಾವ್ ಮಾತುಕತೆ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ರಾಜಕೀಯ ಗರಿಗೆದರಿದೆ. ಭಾಸ್ಕರ್ ರಾವ್ ಇದೀಗ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗ್ತಿರೋದು ಭಾರೀ ಬದಲಾವಣೆಗೂ ಕಾರಣವಾಗಲಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್ 16ರಂದು ಅರ್ಜಿ ಸಲ್ಲಿಸಿದ್ದರು. ನಿರ್ಧಾರ ಪುನರ್ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡಿತ್ತು.
3 ತಿಂಗಳೊಳಗೆ ಗೃಹ ಸಚಿವಾಲಯ ಸಂಬಂಧಿಸಿದ ಅಧಿಕಾರಿಯನ್ನ ಸಂಪರ್ಕಿಸಬೇಕು. 6 ತಿಂಗಳುಗಳೇ ಕಳೆದರೂ ಗೃಹ ಸಚಿವಾಲಯದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನಡಿ ಸೇವೆಗೆ ಗುಡ್ ಬೈ ಹೇಳಿದ್ದಾರೆ.
ಎಐಎಸ್ ಆಕ್ಟ್ 16(2) ಪ್ರಕಾರ ಸಂಬಂಧಿಸಿದ ಅಧಿಕಾರಿ 50 ವರ್ಷ ವಯಸ್ಸು ದಾಟಿರಬೇಕು. 20 ವರ್ಷ ಸೇವೆ ಪೂರ್ಣಗೊಳಿಸಿರಬೇಕು. ನಿವೃತ್ತಿಗೆ ಮನವಿ ಸಲ್ಲಿಸುವಾಗ ಅಮಾನತ್ತಿನಲ್ಲಿರಬಾರದು. ಎಐಎಸ್ ಆಕ್ಟ್ 16(2)ನಡಿ ನಿವೃತ್ತಿಗೆ ಅರ್ಹರಿರುವ ಕಾರಣ ಅಧಿಕೃತವಾಗಿ ಸೇವೆಗೆ ರಾಜೀನಾಮೆ ನಿಡಿದ್ದಾರೆ.
ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.
ಈ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ‘ಆಫೀಸ್‍ನಿಂದ ಮನೆಯ ಕಡೆ ಕೊನೆಯ ಟ್ರಿಪ್’ ಎಂದು ಸಿಬ್ಬಂದಿ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ.
‘ಐಪಿಎಸ್ ನಲ್ಲಿ 32 ವರ್ಷಗಳ ಸೇವೆ ಮುಗಿಸಿದ ನಂತರ ಆಫೀಸ್‍ನಿಂದ ಮನೆಗೆ ನನ್ನ ಕೊನೆಯ ಪ್ರವಾಸ. ನನ್ನ ಸಾರ್ವಜನಿಕ ಜೀವನದಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕರ್ನಾಟಕದ ಜನತೆಗೆ, ನನ್ನ ಎಲ್ಲಾ ಸಹೋದ್ಯೋಗಿಗಳು, ಸ್ನೇಹಿತರು, ಹಿರಿಯರು ಮತ್ತು ಯುವಜನರಿಗೆ ಧನ್ಯವಾದಗಳು. ಪಕ್ಷಾತೀತವಾಗಿ ವಿವಿಧ ಪಕ್ಷಗಳ ಆಡಳಿದಲ್ಲಿದ್ದ ಸರ್ಕಾರಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
Last trip home after curtains down of 32 years in IPS. I have extreme gratitude to my family, the people of Karnataka and all my colleagues,friends,elders & young people in my life and finally the Governments of Karnataka across parties heading into choppy seas pic.twitter.com/6oXcxn8htx
— Bhaskar Rao (@deepolice12)